Health Tips: ಅನ್ನ ತಿಂದ್ರೆ ತೂಕ ಹೆಚ್ಚಾಗುತ್ತಾ? ಯಾವ ಸಮಯದಲ್ಲಿ ತಿನ್ನುವುದು ಉತ್ತಮ?
ಅನ್ನ ತಿನ್ನುವುದರಿಂದ ನಿಜವಾಗಿಯೂ ತೂಕ ಹೆಚ್ಚಾಗುತ್ತಾ? ಅನ್ನ ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಅನ್ನ ಸೇವನೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಅಕ್ಕಿಯು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಬಿಳಿ ಅಕ್ಕಿಯು ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚು ಮತ್ತು ಕಡಿಮೆ ಫೈಬರ್ ಹೊಂದಿರುತ್ತದೆ. ಅತಿಯಾಗಿ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಆದರೆ ಅನ್ನವು ವಾಸ್ತವವಾಗಿ ತೂಕ ಹೆಚ್ಚಿಸುವುದಿಲ್ಲ. ಇದು ತಿನ್ನುವ ಪ್ರಮಾಣ ಮತ್ತು ವಿಧಾನವನ್ನು ಅವಲಂಬಿಸಿರುತ್ತದೆ. ತಜ್ಞರ ಪ್ರಕಾರ ಸೀಮಿತ ಪ್ರಮಾಣದಲ್ಲಿ ಅನ್ನ ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲವೆಂದು ಹೇಳಲಾಗುತ್ತದೆ.
ಬ್ರೌನ್ ರೈಸ್ ಅಥವಾ ಕೆಂಪು ಅಕ್ಕಿ, ಬಿಳಿ ಅಕ್ಕಿಗಿಂತ ಹೆಚ್ಚು ಫೈಬರ್, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಕೆಂಪು ಅಕ್ಕಿ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ದೀರ್ಘಕಾಲ ಹಸಿವು ತಡೆಯುತ್ತದೆ. ತೂಕ ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಹೀಗಾಗಿ ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬೇಳೆಕಾಳುಗಳು, ತರಕಾರಿಗಳು, ಸಲಾಡ್ ಅಥವಾ ಮೊಸರಿನೊಂದಿಗೆ ಅನ್ನ ಸೇವಿಸಬೇಕು. ಇವುಗಳು ನಿಮ್ಮ ಆಹಾರವನ್ನು ಸಮತೋಲನಗೊಳಿಸುತ್ತದೆ. ಆದರೆ ಫ್ರೈಡ್ ರೈಸ್ ಅಥವಾ ಹೆಚ್ಚಿನ ಎಣ್ಣೆಯುಕ್ತ ಅನ್ನವನ್ನು ಆದಷ್ಟು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಅನ್ನ ತಿನ್ನಲು ಮಧ್ಯಾಹ್ನದ ಊಟದ ವೇಳೆಯೇ ಉತ್ತಮ ಸಮಯ. ಈ ವೇಳೆ ದೇಹದ ಜೀರ್ಣಶಕ್ತಿ ಹೆಚ್ಚಾಗಿರುತ್ತದೆ. ಹೀಗಾಗಿ ಅನ್ನದ ಶಕ್ತಿಯನ್ನು ದಿನವಿಡೀ ಬಳಸಬಹುದು. ಒಂದು ವೇಳೆ ರಾತ್ರಿ ಅನ್ನ ತಿನ್ನುವುದಾದರೆ ಸ್ವಲ್ಪ ತಿನ್ನುವುದು ಉತ್ತಮ. ಅನ್ನ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ರಾತ್ರಿಯಲ್ಲಿ ದೇಹದ ಚಯಾಪಚಯ ಕ್ರಿಯೆ ಕಡಿಮೆ ಇರುತ್ತದೆ.