ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹಣ ನೀರಿನಂತೆ ಹರಿದು ಬಂದಿದ್ದೇಗೆ? ಸೀಕ್ರೆಟ್ ಬಿಚ್ಚಿಟ್ಟ ದಿನಕರ್ ತೂಗುದೀಪ!!
ವಿರಾಟ್ ಮತ್ತು ಸಂಜನಾ ಆನಂದ್ ನಟಿಸಿರುವ 'ರಾಯಲ್' ಸಿನಿಮಾ ಇದೇ ಜನವರಿ 24ರಂದು ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯತೆ ಗಳಿಸಿವೆ. ಗಣರಾಜ್ಯೋತ್ಸವದ ವೀಕೆಂಡ್ ಚಿತ್ರಕ್ಕೆ ಸಕ್ಸಸ್ ತಂದುಕೊಡುವ ನಿರೀಕ್ಷೆಯಿದೆ. ಚಿತ್ರದ ಪ್ರಚಾರದ ಭಾಗವಾಗಿ ನಿರ್ದೇಶಕ ದಿನಕರ್ ತೂಗುದೀಪ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ನಟ ದರ್ಶನ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟರು. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದರ್ಶನ್ ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಬಳಿಕ ಹೀರೊ ಆದರು. 'ಮೆಜೆಸ್ಟಿಕ್' ಚಿತ್ರದ ನಂತರ ದರ್ಶನ್ ಹಿಂತಿರುಗಿ ನೋಡಲಿಲ್ಲ. ಆದರೂ ಸಹ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ.
ಒಂದು ಕಾಲದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಸು ಕಟ್ಟಿ ಹಾಲು ಮಾರುತ್ತಿದ್ದ ದರ್ಶನ್ ಬಳಿಕ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡರು. ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಿದ ಅವರು, ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಸಹೋದರ ದಿನಕರ್ ಸಹ ನಿರ್ದೇಶಕರಾಗಿ ಗೆದ್ದರು. 'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ', 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಗಮನ ಸೆಳೆದಿದ್ದಾರೆ. ನಿರ್ಮಾಪಕರಾಗಿಯೂ ಅವರು ಯಶಸ್ವಿ ಆಗಿದ್ದಾರೆ.
ತಂದೆ ತೂಗುದೀಪ ಶ್ರೀನಿವಾಸ್ ಅವರು ಚಿತ್ರರಂಗದಲ್ಲಿ ಖಳನಟನಾಗಿ ಹೆಸರು ಮಾಡಿದರೂ ಹಣ ಸಂಪಾದಿಸಲಿಲ್ಲ. ಆದರೆ ದರ್ಶನ್ ಹಾಗೂ ದಿನಕರ್ ಅದನ್ನು ಸಾಧಿಸಿ ತೋರಿಸಿದರು. ತಮ್ಮಿಬ್ಬರಿಗೆ ಹಣ ಹರಿದು ಬರೋಕೆ ಕಾರಣ ಏನು ಅನ್ನೋದರ ಬಗ್ಗೆ ಸ್ವತಃ ದಿನಕರ್ ಅವರೇ ಹೇಳಿದ್ದಾರೆ. ಚಿಕ್ಕಂದಿನಿಂದ ತನಗೆ ಹಾಗೂ ಸಹೋದರ ದರ್ಶನ್‌ಗೆ ಇದ್ದ ಒಂದು ನಂಬಿಕೆಯ ಬಗ್ಗೆ ಅವರು ಮಾತನಾಡಿದ್ದಾರೆ.
ಅಂದಹಾಗೆ ಬೆಂಗಳೂರಿನಿಂದ ಮೈಸೂರಿಗೆ ದಿನಕರ್ ಹಾಗೂ ವಿರಾಟ್ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಹಾದಿಯಲ್ಲಿ 'ರಾಯಲ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ರಸ್ತೆ ಮಧ್ಯೆ ಕಾರ್ ನಿಲ್ಲಿಸಿದ ದಿನಕರ್ ಹರಿಯುವ ಕಾವೇರಿ ನದಿಯ ನೀರಿಗೆ ಕಾಸು ಹಾಕಿದ್ದಾರೆ. ಇದು ಯಾಕೆ ಅಂತಾ ವಿರಾಟ್ ಪ್ರಶ್ನಿಸಿದಾಗ ಅವರು ಇಂಟರೆಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ʼನಮ್ಮ ತಂದೆ ಬೆಂಗಳೂರಿನಿಂದ ಮೈಸೂರಿಗೆ ಓಡಾಡುವಾಗ ಕಾವೇರಿ ನದಿಗೆ ಕಾಸು ಹಾಕುತ್ತಿದ್ದರು. ನಮ್ಮಪ್ಪನಿಗೆ ಒಂದು ನಂಬಿಕೆ. ಹರಿಯುವ ನೀರಿಗೆ ಕಾಸು ಹಾಕಿದರೆ ನಮಗೂ ಕಾಸು ಹರಿದು ಬರುತ್ತದೆ ಅಂತ. ನಾನು ಹಾಗೂ ದರ್ಶನ್ ಕೂಡ ಅದನ್ನೇ ಫಾಲೋ ಮಾಡ್ತಿರ್ತೀವಿʼ ಎಂದಿದ್ದಾರೆ.
ದಿನಕರ್ ಅವರ ಈ ಮಾತನ್ನ ಕೇಳಿದ ನಟ ವಿರಾಟ್ ಸಹ ಕಾವೇರಿ ನದಿ ನೀರಿಗೆ ಕಾಸು ಹಾಕಿದ್ದಾರೆ. ನಮ್ಮ ʼರಾಯಲ್ʼ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡು ಹೀಗೆ ಹಣ ಹರಿದು ಬರಲಿ ಅಂತಾ ಹೇಳಿ ಇಬ್ಬರೂ ಕಾವೇರಿ ನದಿ ನೀರಿಗೆ ಕಾಸು ಹಾಕಿದ್ದಾರೆ. ಮೈಸೂರಿಗೆ ಭೇಟಿ ನೀಡಿದ ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.