UPSC Success Story: ಕೇವಲ 4 ಗಂಟೆ ಅಧ್ಯಯನ ನಡೆಸಿ ಆಗಿದ್ದು UPSC ಟಾಪರ್!
ಐಎಎಸ್ ಅಧಿಕಾರಿ ಜುನೈದ್ ಅಹ್ಮದ್ ಅವರು ತಮ್ಮ ಶಾಲಾ-ಕಾಲೇಜು ಜೀವನದಲ್ಲಿ ಎಂದಿಗೂ ಶೇ.60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಲಿಲ್ಲ. ಆದರೆ ಅವರು ದೇಶದ ಈ ಕಠಿಣ ಪರೀಕ್ಷೆಗಾಗಿ ದಿನಕ್ಕೆ ಕೇವಲ 4 ಗಂಟೆಗಳ ಕಾಲ ಅಧ್ಯಯನ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. UPSC ಟಾಪರ್ ಆಗಿರುವ ಜುನೈದ್ ಈ ಪರೀಕ್ಷೆಯಲ್ಲಿ ಅಖಿಲ ಭಾರತ 3ನೇ ರ್ಯಾಂಕ್ ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದರು.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ನಿವಾಸಿ ಜುನೈದ್ ಅಹ್ಮದ್ 2018ರ UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದರು. ಐಎಎಸ್ ಅಧಿಕಾರಿ ಜುನೈದ್ ಅಹ್ಮದ್ ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಜುನೈದ್ ತಾಯಿ ಗೃಹಿಣಿ, ಅವರ ತಂದೆ ವಕೀಲರಾಗಿದ್ದಾರೆ. ಜುನೈದ್‌ಗೆ ಇಬ್ಬರು ಕಿರಿಯ ಸಹೋದರರು ಮತ್ತು ಸಹೋದರಿಯರು ಮತ್ತು ಒಬ್ಬ ಅಕ್ಕ ಕೂಡ ಇದ್ದಾರೆ.
ಜುನೈದ್ ಅಹ್ಮದ್ ಶಾಲೆ ಮತ್ತು ಕಾಲೇಜಿನಲ್ಲಿ ಸರಾಸರಿ ವಿದ್ಯಾರ್ಥಿಯಾಗಿದ್ದರು. ಆದರೆ ಕಠಿಣ ಪರಿಶ್ರಮದಿಂದ ದೇಶದ ಅತ್ಯಂತ ಕಠಿಣವಾದ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಸರಾಸರಿ ವಿದ್ಯಾರ್ಥಿ ಸಹ ಉತ್ತೀರ್ಣನಾಗಬಹುದು ಎಂದು ಜುನೈದ್ ಸಾಧಿಸಿ ತೋರಿಸಿದ್ದಾರೆ.
ಜುನೈದ್ ಅಹ್ಮದ್ ಸತತ 3 ಬಾರಿ UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಅವರು ಎಂದಿಗೂ ಎದೆಗುಂದಲಿಲ್ಲ, ಮತ್ತೆ ಮತ್ತೆ ಪ್ರಯತ್ನಿಸಿದರು. 4ನೇ ಪ್ರಯತ್ನದಲ್ಲಿ ಜುನೈದ್ ಅಹಮದ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 352ನೇ ರ್ಯಾಂಕ್ ಪಡೆಯುವ ಮೂಲಕ ಐಆರ್‍ಎಸ್ ಅಧಿಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಆದರೂ ಐಎಎಸ್ ಅಧಿಕಾರಿಯಾಗಬೇಕೆಂಬ ಹಠ ಹಿಡಿದಿದ್ದ ಜುನೈದ್ ಅಹ್ಮದ್ 5ನೇ ಪ್ರಯತ್ನ ನಡೆಸಿ 3ನೇ ರ್ಯಾಂಕ್ ಪಡೆದುಕೊಂಡರು. ಈ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡರು. ಅಹ್ಮದ್ ಸಂದರ್ಶನವೊಂದರಲ್ಲಿ ‘ನಾನು ಹಿರಿಯರು ಶಿಫಾರಸು ಮಾಡಿದ ಕೆಲವು ಪುಸ್ತಕಗಳನ್ನು ಓದಿದೆ. ಅವು ನಾನು ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು, ಪರೀಕ್ಷೆ ಹೇಗೆ ಬರೆಯಬೇಕು ಅನ್ನೋದನ್ನುತಿಳಿಸಿಕೊಟ್ಟವು. ಕೊನೆಗೆ ನಾನು ಅಂದುಕೊಂಡಂತೆ ನನ್ನ ಗುರಿ ಮುಟ್ಟಲು ಸಹಾಯ ಮಾಡಿದವು’ ಎಂದು ಹೇಳಿದ್ದಾರೆ.
ಉಚಿತ ಮಾಹಿತಿಯ ಬಗ್ಗೆ ಮಾತನಾಡಿರುವ ಅಹ್ಮದ್, ‘ಇಂಟರ್ನೆಟ್ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್‍ಲೈನ್‌ನಲ್ಲಿ ಲಭ್ಯವಿದೆ. ಇಂಟರ್ನೆಟ್‌ನ ಸರಿಯಾದ ಬಳಕೆ ನನಗೆ ತುಂಬಾ ಸಹಾಯ ಮಾಡಿದೆ’ ಎಂದು ಹೇಳಿದರು. ಇದಲ್ಲದೇ ನಾನು ಕೇಲ ಮೆರಿಟ್ ಲಿಸ್ಟ್‍ನಲ್ಲಿ ಕಾಣಿಸಿಕೊಳ್ಳುತ್ತೇನೆಂದು ನಿರೀಕ್ಷಿಸಿದ್ದೆ ಆದರೆ 3ನೇ ರ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ ಎಂದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ಪ್ರತಿದಿನ 4-5 ಗಂಟೆಗಳ ಕಾಲ ಓದುತ್ತಿದ್ದೆ’ ಎಂದು ಹೇಳಿದ್ದಾರೆ.