ಕ್ಯಾಬ್ ಚಾಲಕನ ಮಗಳು ಐಎಎಸ್ ಆಫೀಸರ್ ಆದ ಸ್ಫೂರ್ತಿದಾಯಕ ಯಶೋಗಾಥೆ
ಸಿ.ವನಮತಿಯವರು ಅತ್ಯಂತ ಬಡತನದ ಕುಟುಂಬದಲ್ಲಿ ಜನಿಸಿದರು. ಮಗಳ ಓದಿಗೆ ದುಡ್ಡು ಹೊಂದಿಸಲು ಅವರ ತಂದೆ ಅಷ್ಟೇನೂ ಸ್ಥಿತಿವಂತರಿರಲಿಲ್ಲ. ಆರ್ಥಿಕವಾಗಿ ಸದೃಢರಲ್ಲದ ಕುಟುಂಬದಲ್ಲಿ ಜನಿಸಿದ ವನಮತಿಯವರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಆರ್ಥಿಕ ಸಂಕಷ್ಟದ ಆರಂಭಿಕ ದಿನಗಳಲ್ಲಿ ಅವರು ಜಾನುವಾರುಗಳ ಪಾಲನೆ-ಪೋಷಣೆ ಮಾಡುವ ಜವಾಬ್ದಾರಿ ಹೊತ್ತಿದ್ದರು. ಆದರೆ ಅವರು ಓದಿನಲ್ಲಿ ಸದಾ ಮುಂದಿದ್ದರು. ಕುಟುಂಬದಿಂದ ಬೆಂಬಲ ಪಡೆದ ಅವರು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು.
ಸಿ.ವನಮತಿಯು ಎರಡು ವಿಭಿನ್ನ ಘಟನೆಗಳಿಂದ ಐಎಎಸ್ ಅಧಿಕಾರಿಯಾಗಲು ಸ್ಫೂರ್ತಿ ಪಡೆದರು. ಒಬ್ಬ ಮಹಿಳೆ ತನ್ನ ತವರೂರಿನ ಜಿಲ್ಲಾಧಿಕಾರಿಯಾಗಿ ಬಂದಿದ್ದಳು. 2ನೇಯದು ಯಮುನಾ ಸರಸ್ವತಿ ಹೆಸರಿನ ಟಿವಿ ಕಾರ್ಯಕ್ರಮ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ಐಎಎಸ್ ಅಧಿಕಾರಿಯಾಗಿ ನಟಿಸಿದ್ದರು. ಇವೆರಡೂ ಘಟನೆ ಅವರು ಐಎಎಸ್ ಅಧಿಕಾರಿಯಾಗಲು ಸ್ಫೂರ್ತಿಯಾಗಿದ್ದವು.
ತನ್ನ ಹೆತ್ತವರ ಬೆಂಬಲದ ಹೊರತಾಗಿಯೂ, ಪದವಿ ಪಡೆದ ನಂತರ ಮದುವೆಯಾಗಲು ಸಿ.ವನಮತಿಯವರಿಗೆ ಒತ್ತಡವಿತ್ತು. ಆದರೆ ಅವರು ಎಲ್ಲಾ ಒತ್ತಡಗಳ ವಿರುದ್ಧ ಹೋರಾಟ ನಡೆಸಿದರು. UPSC ಪರೀಕ್ಷೆಯ ಸಿದ್ಧತೆಗಾಗಿ ಮಾನಸಿಕವಾಗಿ ಸಿದ್ಧರಾದರು. ಕಂಪ್ಯೂಟರ್ ಅಪ್ಲಿಕೇಶನ್ ವಿಷಯದಲ್ಲಿ ತನ್ನ ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುವುದರ ಜೊತೆ ಜೊತೆಗೆ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಖಾಸಗಿ ಕಂಪನಿಯಲ್ಲಿ ಕೆಲಸವನ್ನೂ ಮಾಡುತ್ತಿದ್ದರು.
ಜೀವನದಲ್ಲಿ ಬರುವ ಯಾವುದೇ ರೀತಿಯ ಕಷ್ಟಗಳನ್ನು ನಿಭಾಯಿಸುವುದನ್ನು ರೂಢಿಸಿಕೊಳ್ಳುವುವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ವನಮತಿಯವರಿಗೆ ತಮ್ಮ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ. ಅನೇಕ ಸಂಕಷ್ಟಗಳ ನಡುವೆ ಪರೀಕ್ಷೆ ಬರೆದಿದ್ದ ಅವರಿಗೆ ಇದು ಒಂದು ರೀತಿಯ ಸವಾಲು ಆಗಿತ್ತು. ಹೀಗಾಗಿಯೇ ಅವರು ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ತಮ್ಮ 2ನೇ ಪ್ರಯತ್ನದಲ್ಲಿ ಸಿ.ವನಮತಿಯವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕ್ಯಾಬ್ ಡ್ರೈವರ್ ಮಗಳಾಗಿದ್ದ ಸಿ.ವನಮತಿ 152ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.