ICC World Cup 2023: ಭಾರತ vs ಆಸ್ಟ್ರೇಲಿಯಾ ಫೈನಲ್ ಫೈಟ್; ಯಾರಿಗೆ ವಿಶ್ವಕಪ್ ಕಿರೀಟ..?
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 150 ಏಕದಿನ ಪಂದ್ಯಗಳು ನಡೆದಿದ್ದು, ಈ ಪೈಕಿ ಆಸ್ಟ್ರೇಲಿಯಾ 83 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಭಾರತ 57 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10 ಪಂದ್ಯಗಳಿಗೆ ಯಾವುದೇ ಫಲಿತಾಂಶ ಲಭಿಸಿಲ್ಲ. ಇನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳ ನಡುವೆ ಒಟ್ಟು 13 ಪಂದ್ಯಗಳು ನಡೆದಿದ್ದು, ಈ ಪೈಕಿ ಆಸ್ಟ್ರೇಲಿಯಾ 8 ಪಂದ್ಯ ಗೆದ್ದರೆ, ಭಾರತ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಭಾರತ ತಂಡ ಪೈಕಿ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ 10 ಪಂದ್ಯಗಳಿಂದ 711 ರನ್ ಗಳಿಸಿದ್ದಾರೆ, ನಾಯಕ ರೋಹಿತ್ ಶರ್ಮಾ 550 ರನ್ ಗಳಿಸಿದ್ದಾರೆ. ಬೌಲಿಂಗ್‍ನಲ್ಲಿ ಮೊಹಮ್ಮದ್ ಶಮಿ 23 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬೂಮ್ರಾ 18 ವಿಕೆಟ್ ಗಳಿಸಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾ ಪರ ಬ್ಯಾಟಿಂಗ್‍ನಲ್ಲಿ ಡೇವಿಡ್ ವಾರ್ನರ್ 10 ಪಂದ್ಯಗಳಲ್ಲಿ 528 ರನ್ ಗಳಿಸಿದ್ದು, ಮಿಚೆಲ್ ಮಾರ್ಷ್ 426 ರನ್ ಗಳಿಸಿದ್ದಾರೆ. ಬೌಲಿಂಗ್‍ನಲ್ಲಿ ಆಡಮ್ ಜಂಪಾ 22 ವಿಕೆಟ್ ಕಬಳಿಸಿದರೆ, ಜೋಶ್ ಹ್ಯಾಜಲ್‍ವುಡ್ 14 ವಿಕೆಟ್ ಪಡೆದುಕೊಂಡಿದ್ದಾರೆ.
ಭಾರತ ತಂಡದಲ್ಲಿ ಬ್ಯಾಟಿಂಗ್ ಲೈನ್‍ಅಪ್, 8ನೇ ಕ್ರಮಾಂಕದವರೆಗೂ ರನ್ ಗಳಿಸುವ ಆಟಗಾರರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸಮತೋಲನವಿದ್ದು, ಮೂವರು ವೇಗಿಗಳು ಮತ್ತು ಇಬ್ಬರು ಪರಿಣತ ಸ್ಪಿನ್ನರ್‍ಗಳು ಇದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕ ಬ್ಯಾಟರ್‍ಗಳೇ ತಂಡದ ದೊಡ್ಡ ಶಕ್ತಿ. ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಸ್ಫೋಟಕ ಆರಂಭ ನೀಡಬಲ್ಲರು. ಇನ್ನು ಆಸೀಸ್ ತಂಡದಲ್ಲಿ ಹೆಚ್ಚು ಬೌಲಿಂಗ್ ಆಲ್‍ರೌಂಡರ್‍ಗಳು ಇದ್ದಾರೆ. ಸ್ಪಿನ್ನರ್ ಆಡಂ ಜಂಪಾ ಉತ್ತಮ ಫಾರ್ಮ್‍ನಲ್ಲಿದ್ದಾರೆ.
ಭಾರತ ತಂಡದಲ್ಲಿ ಬೌಲರ್‍ಗಳು ಇತರೆ(Extra) ರನ್‍ಗಳನ್ನು ಹೆಚ್ಚು ಬಿಟ್ಟುಕೊಟ್ಟಿದ್ದಾರೆ. ಕೆಲವು ಫೀಲ್ಡರ್‍ಗಳು ನಿರಂತರವಾಗಿ ಕ್ಯಾಚ್‍ಗಳನ್ನು ಕೈಚೆಲ್ಲಿದ್ದಾರೆ. ಇಲ್ಲಿವರೆಗೆ ನಡೆದ 10 ಪಂದ್ಯಗಳ ಪೈಕಿ ಟೀಂ ಇಂಡಿಯಾದವರು 6ಕ್ಕೂ ಹೆಚ್ಚು ಕ್ಯಾಚ್‍ಗಳನ್ನು ಬಿಟ್ಟಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಪೂರ್ಣಾವಧಿ ಸ್ಪಿನ್ನರ್ ಒಬ್ಬರೇ ಇದ್ದಾರೆ. ಫೀಲ್ಡಿಂಗ್‍ನಲ್ಲಿ ಆಸೀಸ್ ಆಟಗಾರರು ಇದುವರೆಗೆ 12 ಕ್ಯಾಚ್‍ಗಳನ್ನು ಕೈಚೆಲ್ಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವು ಇಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಕ್ರಿಕೆಟ್ ಪ್ರೇಮಿಗಳು ಸ್ಟಾರ್ ಸ್ಫೋರ್ಟ್ಸ್ ನೆಟ್‍ವರ್ಕ್ಸ್ ಮತ್ತು ಹಾಟ್‍ಸ್ಟಾರ್ ಆಪ್‍ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಚಾಂಪಿಯನ್ ತಂಡಕ್ಕೆ 33 ಕೋಟಿ ರೂ. ಬಹುಮಾನ ಸಿಕ್ಕರೆ, ರನ್ನರ್ಸ್ ಅಪ್ ತಂಡಕ್ಕೆ 18 ಕೋಟಿ ರೂ. ದೊರೆಯಲಿದೆ.