ಈತ ಟೀಂ ಇಂಡಿಯಾ ಕೋಚ್ ಆದ್ರೆ ವಿರಾಟ್ ವೃತ್ತಿಜೀವನ ಅಂತ್ಯ! ಗಂಗೂಲಿ ಪರಿಸ್ಥಿತಿ ಕೊಹ್ಲಿಗೂ ಎದುರಾಗುವ ಸಾಧ್ಯತೆ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಸೋಮವಾರ ಕೊನೆಗೊಂಡಿದೆ. ಈ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಗಂಭೀರ್ ಆಗಲಿ ಅಥವಾ ಬಿಸಿಸಿಐ ಆಗಲಿ ಏನೂ ಹೇಳಿಲ್ಲ.
ಟಿ20 ವಿಶ್ವಕಪ್ 2024ರ ಬಳಿಕ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ಟಿ20 ವಿಶ್ವಕಪ್ ಜೂನ್ 1 ರಿಂದ ಜೂನ್ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೂರನೇ ಬಾರಿ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿಯುವಂತೆ ಮಾಡಿದ ಕೀರ್ತಿ ಗೌತಮ್ ಗಂಭೀರ್’ಗೆ ಸಲ್ಲುತ್ತದೆ. ಈ ಯಶಸ್ಸಿನ ಬಳಿಕ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಕ್ರಿಕೆಟ್’ನ ದೇಶೀಯ ರಚನೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಅಭ್ಯರ್ಥಿಯನ್ನು ನಾವು ಹುಡುಕುತ್ತಿದ್ದೇವೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಈ ಹಿಂದೆ ಹೇಳಿದ್ದಾರೆ. ಬಿಸಿಸಿಐ ವಿವಿಎಸ್ ಲಕ್ಷ್ಮಣ್ ಮೇಲೆ ಕಣ್ಣಿಟ್ಟಿತ್ತು. ಆದರೆ ಹೈದರಾಬಾದ್’ನ ಈ ಸ್ಟೈಲಿಶ್ ಮಾಜಿ ಕ್ರಿಕೆಟಿಗ ಪೂರ್ಣ ಸಮಯದ ಸ್ಥಾನಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಲಕ್ಷ್ಮಣ್ ಪ್ರಸ್ತುತ NCA (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮುಖ್ಯಸ್ಥರಾಗಿದ್ದಾರೆ.
ಇನ್ನೊಂದೆಡೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಹೊಸ ಕೋಚ್ ಯಾರೆಂಬುದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಒಂದು ವೇಳೆ ಗಂಭೀರ್ ಕೋಚ್ ಆದರೆ ಕೊಹ್ಲಿ ವೃತ್ತಿ ಜೀವನಕ್ಕೆ ಸಮಸ್ಯೆ ಆಗಬಹುದು ಎಂಬುದು ಕೆಲವರ ವಾದ.
ಈ ಹಿಂದೆ ಜಾನ್ ರೈಟ್ ಟೀಂ ಇಂಡಿಯಾದ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಕೋಚ್ ಆದರು. ಆಗ ತಂಡ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ, ಕೋಚ್ ಗ್ರೆಗ್ ಚಾಪೆಲ್ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಬಳಿಕ ತಂಡದಲ್ಲಿ ಸ್ಥಾನ ಕಳೆದುಕೊಂಡರು.
ಇದೀಗ ಗಂಭೀರ್ ಕೋಚ್ ಆದರೆ, ಗಂಗೂಲಿ ಅನುಭವಿಸಿದ ಸಂಕಷ್ಟವನ್ನೇ ಕೊಹ್ಲಿಯೂ ಅನುಭವಿಸಬೇಕಾಗಬಹುದು ಎಂಬುದು ಅಭಿಮಾನಗಳ ಆತಂಕ.