ಬ್ಯಾಂಕ್ ನಲ್ಲಿ RD ಮಾಡಿಸಿದ್ದರೆ ಪೆನಾಲ್ಟಿ ನಿಯಮವೂ ತಿಳಿದಿರಲಿ, ಸಣ್ಣ ತಪ್ಪು ಭಾರೀ ನಷ್ಟಕ್ಕೆ ಕಾರಣವಾಗಬಹುದು
ಪ್ರತಿ ತಿಂಗಳು ಜಮಾ ಮಾಡಬೇಕಾದ ಮೊತ್ತ, ದಿನಾಂಕ ಮತ್ತು ಬಡ್ಡಿ ದರಗಳನ್ನು ಆರ್‌ಡಿ ಖಾತೆ ತೆರೆಯುವ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಗ್ರಾಹಕ ತನ್ನ ಅನುಕೂಲಕ್ಕೆ ತಕ್ಕಂತೆ, ಎಷ್ಟು ವರ್ಷಗಳ ಕಾಲ RD ಮಾಡಿಸುವುದು ಎನ್ನುವುದನ್ನು ನಿರ್ಧರಿಸುತ್ತಾನೆ. . ಎಸ್‌ಬಿಐನ ಆರ್‌ಡಿ ಯೋಜನೆಯ ಬಗ್ಗೆ ಹೇಳುವುದಾದರೆ ಕನಿಷ್ಠ 1 ವರ್ಷ ಮತ್ತು ಗರಿಷ್ಠ 10 ವರ್ಷಗಳವರೆಗೆ ತೆರೆಯಬಹುದು. ಕನಿಷ್ಠ ಠೇವಣಿ 100 ರೂ ಆಗಿರುತ್ತದೆ.
ನಿಗದಿತ ದಿನಾಂಕದಂದು ಆರ್‌ಡಿ ಮೊತ್ತವನ್ನು ಜಮಾ ಮಾಡದಿದ್ದರೆ ಬ್ಯಾಂಕ್ ದಂಡವನ್ನು ವಿಧಿಸಬಹುದು. ಪ್ರತಿ ಬ್ಯಾಂಕ್ ಈ ಬಗ್ಗೆ ವಿಭಿನ್ನ ನಿಯಮಗಳನ್ನು ಹೊಂದಿದೆ. ಎಸ್‌ಬಿಐನಲ್ಲಿ, 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯವರೆಗೆ ಆರ್‌ಡಿ ಮಾಡಿ, ಕಂತುಗಳನ್ನು ಸಮಯಕ್ಕೆ ಸರಿಯಾಗಿ ಜಮಾ ಮಾಡದಿದ್ದರೆ, 100 ರೂಪಾಯಿಗಳಿಗೆ 1.50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಆರ್ ಡಿ 5 ವರ್ಷಗಳಿಗಿಂತ ಹೆಚ್ಚಿದ್ದರೆ, ಈ ದಂಡವು 100 ರೂಪಾಯಿಗಳಿಗೆ 2 ರೂ. ಆಗಿರುತ್ತದೆ. ಇನ್ನು ಸತತ 6 ಕಂತುಗಳನ್ನು ಜಮಾ ಮಾಡದಿದ್ದರೆ, ಬ್ಯಾಂಕ್ ಖಾತೆಯನ್ನು ಮುಚ್ಚುತ್ತದೆ ಮತ್ತು ಉಳಿದ ಮೊತ್ತವನ್ನು ಖಾತೆದಾರರಿಗೆ ನೀಡುತ್ತದೆ.
ಅತ್ಯಂತ ನೇರ ಮತ್ತು ಸರಳವಾದ ಮಾರ್ಗವೆಂದರೆ ನೀವು ಆರ್‌ಡಿ ಕಂತನ್ನು ನಿಗದಿತ ದಿನಾಂಕದಂದು ಜಮಾ ಮಾಡಿದರೆ, ಯಾವುದೇ ದಂಡವಿರುವುದಿಲ್ಲ. ಇದಕ್ಕಾಗಿ, ನೀವು ಬ್ಯಾಂಕಿನ ಆಟೋ ಡೆಬಿಟ್ ಸೌಲಭ್ಯವನ್ನು ಬಳಸಬಹುದು. ಇದರಲ್ಲಿ, ನಿಮ್ಮ ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ಆರ್‌ಡಿ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಆದರೆ ಕಂತಿನ ದಿನಾಂಕದಂದು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಬೇಕು ಎನ್ನುವುದು ನೆನಪಿರಲಿ.
ನೀವು ಆರ್‌ಡಿ ಖಾತೆಯನ್ನು ತೆರೆದಿದ್ದರೆ, ಅಗತ್ಯವಿದ್ದಾಗ ನೀವು ಸಾಲ ಅಥವಾ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು. RD ಯ ಮುಕ್ತಾಯದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ, ಖಾತೆದಾರರು ನಮೂನೆ 15G/15H ಸಲ್ಲಿಸುವ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು.