New Rules from December 1: ಇಂದಿನಿಂದ ಬದಲಾಗಲಿವೆ ಈ ಪ್ರಮುಖ ನಿಯಮಗಳು
ಇಂದಿನಿಂದ ದುಬಾರಿಯಾಗಲಿದೆ ಕಾರು ಖರೀದಿ: ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಂದಿನಿಂದ ಕಾರು ಖರೀದಿ ದುಬಾರಿಯಾಗಲಿದೆ. ವಾಸ್ತವವಾಗಿ, 01 ಡಿಸೆಂಬರ್ 2022ರಿಂದ ಥರ್ಡ್ ಪಾರ್ಟಿ ವಿಮೆ ಹೆಚ್ಚಿಸಲಾಗಿದೆ. ಆದಾಗ್ಯೂ, ವಿಮಾ ಶುಲ್ಕ ಕೊಂಚವೇ ಹೆಚ್ಚಳವಾಗಿದ್ದು ಇದು ಜನಸಾಮಾನ್ಯರಿಗೆ ತುಂಬಾ ಹೊರೆ ಎಂದೆನಿಸುವುದಿಲ್ಲ.
ಪಿಎನ್‌ಬಿ ಗ್ರಾಹಕರು ಮೊದಲಿನಂತೆ ಎಟಿಎಂನಿಂದ ಹಣ ತೆಗೆಯುವಂತಿಲ್ಲ: ಇಂದಿನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಎಟಿಎಂ ನಿಂದ ಮೊದಲಿನಂತೆ ಹಣ ತೆಗೆಯಲು ಸಾಧ್ಯವಾಗುವುದಿಲ್ಲ. ಈಗ ಪಿಎನ್‌ಬಿ ಗ್ರಾಹಕರಿಗೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ನೋಂದಾಯಿತ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿದ ನಂತರವಷ್ಟೇ ಗ್ರಾಹಕರು ಹಣ ವಿತ್ ಡ್ರಾ ಮಾಡಲು ಸಾಧ್ಯವಾಗುತ್ತದೆ.
ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ಬೆಲೆ ಬದಲಾವಣೆ: ಪ್ರತಿ ತಿಂಗಳ ಮೊದಲ ದಿನದಂತೆಯೇ ಡಿಸೆಂಬರ್ 01ರಿಂದಲೂ ಕೂಡ ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ಬೆಲೆಯನ್ನು ಪರಿಶೀಲಿಸಲಾಗುತ್ತದೆ. ಗಮನಾರ್ಹವಾಗಿ, ಕಳೆದ ಐದು ತಿಂಗಳಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಅಗ್ಗವಾಗಿವೆ. ಈ ಬಾರಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಇದಲ್ಲದೇ ಎಟಿಎಫ್ ಬೆಲೆಯಲ್ಲೂ ಬದಲಾವಣೆಯಾಗಬಹುದು ಎಂದು ಹೇಳಲಾಗುತ್ತಿದೆ.
ಇಂತಹವರಿಗೆ ಪಿಂಚಣಿ ನಿಲ್ಲಬಹುದು: ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು 30 ನವೆಂಬರ್ 2022 ಕೊನೆಯ ದಿನವಾಗಿತ್ತು. ಇದುವರೆಗೂ ಅದರಲ್ಲಿ ಯಾವುದೇ ಬದಲಾವಣೆಯನ್ನು ಘೋಷಿಸಲಾಗಿಲ್ಲ. ಹಾಗಾಗಿ, ನಿನ್ನೆಯೊಳಗೆ ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲಿದಿದ್ದರೆ ನಿಮ್ಮ ಪಿಂಚಣಿಯನ್ನು ಸ್ಥಗಿತಗೊಳಿಸಬಹುದು.
ರೈಲು ಸಂಚಾರದಲ್ಲಿ ವ್ಯತ್ಯಯ: ಡಿಸೆಂಬರ್‌ನಲ್ಲಿ ದೇಶದ ಕೆಲವು ಭಾಗಗಳಲ್ಲಿ ಮಂಜಿನ ದಟ್ಟಣೆ ಹೆಚ್ಚಾಗುತ್ತಿದ್ದು ಹಲವು ರೈಲುಗಳ ಸಮಯ ಬದಲಾವಣೆ ಮಾಡಲಾಗಿದೆ. ಮಾತ್ರವಲ್ಲ, ಭಾರತೀಯ ರೈಲ್ವೆಯು ಇಂದಿನಿಂದ (1 ಡಿಸೆಂಬರ್ 2022 ) ಮಾರ್ಚ್ 2023 ರವರೆಗೆ ಸುಮಾರು 50 ರೈಲುಗಳನ್ನು ರದ್ದುಗೊಳಿಸಿದೆ.