MS Dhoni: ನಿವೃತ್ತಿಯಾದ್ರೂ ತಗ್ಗಿಲ್ಲ ಧೋನಿ ಆದಾಯ: ಕ್ಯಾಪ್ಟನ್ ಕೂಲ್ ಮಾಹಿ ಎಷ್ಟು ಸಾವಿರ ಕೋಟಿ ಆಸ್ತಿ ಒಡೆಯ ಗೊತ್ತಾ?
'ಕ್ಯಾಪ್ಟನ್ ಕೂಲ್' ಎಂದೇ ಜಗತ್ಪ್ರಸಿದ್ಧರಾಗಿರುವ ಎಂಎಸ್ ಧೋನಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಇವರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಇವರ ನಾಯಕತ್ವದಲ್ಲೇ ಗೆದ್ದಿದ್ದು. ವಿಶ್ವ ಕ್ರಿಕೆಟ್’ನ ಅತ್ಯುತ್ತಮ ಫಿನಿಶರ್’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅಂದಹಾಗೆ ನಾವಿಂದು ಧೋನಿ ಆಸ್ತಿ ಮೌಲ್ಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಜುಲೈ 7, 1981 ರಂದು ರಾಂಚಿಯಲ್ಲಿ ಹಿಂದೂ ರಜಪೂತ ಕುಟುಂಬದಲ್ಲಿ ಜನಿಸಿದ ಧೋನಿ ಇಂದು ಜಗತ್ತಿನಲ್ಲೇ ಮೆಚ್ಚುಗೆ ಗಳಿಸಿದ ಕ್ರಿಕೆಟಿಗ ಎಂದೆನಿಸಲ್ಪಟ್ಟಿದ್ದಾರೆ. ಇವರ ತಂದೆಯ ಹೆಸರು ಪಾನ್ ಸಿಂಗ್ ಮತ್ತು ತಾಯಿಯ ಹೆಸರು ದೇವಕಿ ದೇವಿ.
ಜುಲೈ 4, 2010 ರಲ್ಲಿ ಧೋನಿ ಸಾಕ್ಷಿ ಸಿಂಗ್ ರಾವತ್ ಅವರನ್ನು ವಿವಾಹವಾದರು. ಈ ಜೋಡಿಗೆ ಜೀವಾ ಎಂಬ ಮಗಳಿದ್ದಾಳೆ. ಅಂದಹಾಗೆ ಕ್ರೀಡೆಯ ಮೇಲಿನ ಅಪಾರ ಪ್ರೀತಿಯಿಂದಾಗಿ ಧೋನಿ ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟು ಸಂಪೂರ್ಣವಾಗಿ ಕ್ರಿಕೆಟ್’ನತ್ತ ಗಮನ ಹರಿಸಿದರು.
ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಧೋನಿ ಆಸ್ತಿ ಮೌಲ್ಯದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಧೋನಿ ಸರಿಸುಮಾರು 1040 ಕೋಟಿ ರೂ.ಆಸ್ತಿಯ ಒಡೆಯ. ಅವರ ವಾರ್ಷಿಕ ಆದಾಯ ಸುಮಾರು 50 ಕೋಟಿ ರೂ. ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕನಾಗಿ ಧೋನಿ 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ಅವರ ಬ್ರಾಂಡ್ ಮೌಲ್ಯವು ತುಂಬಾ ಹೆಚ್ಚಾಗಿದ್ದು, ಎಂಡಾರ್ಸ್‌ಮೆಂಟ್’ಗಳ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.
ಇದಲ್ಲದೇ ರಿಯಲ್ ಎಸ್ಟೇಟ್ ಹೂಡಿಕೆಯಿಂದ ಧೋನಿ ಕೋಟ್ಯಂತರ ರೂ. ಗಳಿಸುತ್ತಾರೆ. ಇದರ ಜೊತೆ ಧೋನಿ ಇನ್‌ಸ್ಟಾಗ್ರಾಮ್’ನಲ್ಲಿ 44 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಟ್ವಿಟರ್’ನಲ್ಲಿ 8.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು 1 ರಿಂದ 2 ಕೋಟಿ ರೂ. ಪಡೆಯುತ್ತಾರೆ ಮಾಹಿ.
ಇದಲ್ಲದೆ, ಧೋನಿ ಫುಟ್‌ಬಾಲ್ ತಂಡ ಚೆನ್ನೈಯಿನ್ ಎಫ್ ಸಿ, ಮಾಹಿ ರೇಸಿಂಗ್ ಟೀಮ್ ಇಂಡಿಯಾ ಮತ್ತು ಫೀಲ್ಡ್ ಹಾಕಿ ತಂಡ ರಾಂಚಿ ರೇಂಜ್’ನ ಸಹ-ಮಾಲೀಕರಾಗಿದ್ದಾರೆ. ಇತ್ತೀಚೆಗೆಯಷ್ಟೇ 'ಧೋನಿ ಎಂಟರ್‌ಟೈನ್‌ಮೆಂಟ್' ಹೆಸರಿನ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸಹ ಪ್ರಾರಂಭಿಸಿದ್ದಾರೆ.
ಧೋನಿ ತವರು ರಾಂಚಿಯಲ್ಲಿ ಐಷಾರಾಮಿ ಮನೆ ಇದ್ದು, ಆ ಮನೆ ವಿನ್ಯಾಸ ಸ್ವತಃ ಅವರೇ ಮಾಡಿದ್ದಾರೆ. ಅದಕ್ಕೆ ಬರೋಬ್ಬರಿ 6 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ಧೋನಿ ರಾಂಚಿಯಲ್ಲಿ 44 ಎಕರೆ ಫಾರ್ಮ್ ಹೌಸ್ ಹೊಂದಿದ್ದು, ನಗರದ ಹಳೆಯ ಭಾಗದಲ್ಲಿ ಮತ್ತೊಂದು ಮನೆಯನ್ನು ನಿರ್ಮಿಸಿದ್ದಾರೆ.