ಭೂಕಂಪ-ಸುನಾಮಿಯಿಂದ ತತ್ತರಿಸಿದ ಇಂಡೋನೇಶಿಯಾ: In Pics
ಸುನಾಮಿ ಮತ್ತು ಭೂಕಂಪದಿಂದ ಮನೆಗಳನ್ನು ಕಳೆದುಕೊಂಡ ಜನತೆ ಸಣ್ಣ ಗುಡಾರಗಳನ್ನು ಕಟ್ಟಿಕೊಂಡು ಮೂಲಸೌಕರ್ಯಗಳು ದೊರೆಯದೆ ಕಷ್ಟಪಡುತ್ತಿದ್ದಾರೆ.
ಆಹಾರ, ಮೂಲ ಸೌಕರ್ಯ, ಬಟ್ಟೆ, ವಸತಿ, ವೈದ್ಯಕೀಯ ಸೌಲಭ್ಯ ದೊರೆಯದೆ ಹಳ್ಳಿಗಾಡಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಜನರ ಸಹಾಯಕ್ಕೆ ಯಾರೂ ಮುಂದಾಗಿಲ್ಲ. ಇಂಡೋನೇಶಿಯಾ ಸರ್ಕಾರ ಸುನಾಮಿಯಲ್ಲಿ ತೊಂದರೆಗೊಳಗಾದ ರಾಷ್ಟ್ರ ರಾಜಧಾನಿ ಪಲು ಪ್ರದೇಶದಲ್ಲಿ ಮಾತ್ರ ರಕ್ಷಣಾ ಕಾರ್ಯ ಕೈಗೊಂಡಿದೆ. ಅಲ್ಲದೆ, ಸಂತ್ರಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ಹಳ್ಳಿಗಾಡಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಭೂಕಂಪದಿಂದ ತೊಂದರೆಗೊಳಗಾಗಿರುವ ಇತರ ಪ್ರದೇಶಗಳ ಜನರ ಬಗ್ಗೆ ಮಾಹಿತಿ ದೊರೆತಿಲ್ಲ ಎಂದಿದ್ದಾರೆ.
ಡ್ಯಾಂಗ್ಲಾ, ಸಿಗಿ ಮತ್ತು ಪಾರಿಗಿ ಮುಂಟಂಗ್ಗ್ ರಿಜೆನ್ಸಿಗಳಲ್ಲಿ ದಿನದಿಂದ ದಿನಕ್ಕೆ ಜನತೆಯ ಆಕ್ರೋಶ ಹೆಚ್ಚುತ್ತಿದೆ. ದೂರದ ಹಳ್ಳಿಗಳು ಮತ್ತು ಪಟ್ಟಣಗಳ ನಿವಾಸಿಗಳು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ರಕ್ಷಣಾ ಸಿಬ್ಬಂದಿ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಆರೋಪಿಸಿದ್ದಾರೆ.
ಪಲು ಹೊರತುಪಡಿಸಿ ಸುತ್ತಮುತ್ತಲಿನ ಹಲವು ಗ್ರಾಮಗಳ ಬಗ್ಗೆ ಗಮನ ಹರಿಸಿಲ್ಲ. ಡ್ಯಾಂಗ್ಲಾದಲ್ಲಿಯೂ ಸಾಕಷ್ಟು ಗ್ರಾಮಗಳು ಹಾನಿಗೊಳಗಾಗಿವೆ. ಅಷ್ಟೇ ಅಲ್ಲ, ಜನರು ರಸ್ತೆಯಲ್ಲಿಯೇ ವಾಸಿಸುತ್ತಿದ್ದಾರೆ. ರಸ್ತೆಯಲ್ಲಿಯೇ ಆಹಾರ, ನಿದ್ದೆ ಎಲ್ಲವೂ. ಮತ್ತೊಂದೆಡೆ ರಸ್ತೆಯಲ್ಲಿ ಮಕ್ಕಳು ಭಿಕ್ಷೆ ಬೇಡುವ ದೃಶ್ಯಗಳು ಮನಕಲಕುವಂತಿದೆ.
ಭೂಕಂಪ ಮತ್ತು ಸುನಾಮಿಯಿಂದಾಗಿ ತೊಂದರೆಗೀಡಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ 6,400 ಮಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಇತರ ರಾಷ್ಟಗಳ ಸಹಾಯವನ್ನೂ ಇಂಡೋನೇಶಿಯಾ ಕೋರಿದೆ. ಹಾಗಾಗಿ ಎಲ್ಲಾ ಸಮಸ್ಯೆಗಳನ್ನು ನೀಗಿಸಲು ಮತ್ತಷ್ಟು ಸಮಯವಾಗಲಿದೆ.
ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಅಲ್ಲದೆ, ಸುನಾಮಿಯಿಂದಾಗಿ ಸುಮಾರು 832 ಮಂದಿ ಮೃತಪಟ್ಟಿದ್ದರು. ಸುಮಾರು 350,000 ಜನಸಂಖ್ಯೆ ಹೊಂದಿರುವ ಸುಲುವೆಸಿ ದ್ವೀಪಕ್ಕೆ ಸುಮಾರು 6 ಮೀಟರ್ (20 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ್ದವು.