ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಸಿಡಿಸಿದ ಕ್ರಿಕೆಟಿಗ ಯಾರು ಗೊತ್ತೇ? ಈತ ಭಾರತೀಯನೂ ಹೌದು… ಮೊದಲ ಅರ್ಧಶತಕ ಬಾರಿಸಿದ್ದೂ ಇವರೇ
ಡಿಸೆಂಬರ್ 4, 1910 ರಲ್ಲಿ ಜನಿಸಿದ ಅಮರ್ ಸಿಂಗ್, ಭಾರತದ ಶ್ರೇಷ್ಠ ಆಲ್‌ರೌಂಡರ್’ಗಳಲ್ಲಿ ಒಬ್ಬರು. ಕ್ರಿಕೆಟ್ ಜಗತ್ತಿನ ದಿಗ್ಗಜರು ಸಹ ಅಮರ್ ಸಿಂಗ್ ಅವರನ್ನು, ತಾವು ಎದುರಿಸಿದ ಶ್ರೇಷ್ಠ ಬೌಲರ್’ಗಳಲ್ಲಿ ಒಬ್ಬರು ಎಂಬ ಹೇಳಿಕೆಗಳನ್ನು ನೀಡಿ ಬಣ್ಣಿಸಿದ್ದರು.
ನಾವಿಂದು ಈ ವರದಿಯಲ್ಲಿ ಅಮರ್ ಸಿಂಗ್ ಅವರ ಶ್ರೇಷ್ಠ ಕೊಡುಗೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅಮರ್ ಸಿಂಗ್ ಭಾರತದ ಮೊದಲ ಟೆಸ್ಟ್ ಕ್ರಿಕೆಟಿಗ. ವರ್ಣಮಾಲೆಯ ಅನುಸಾರ ಅಮರ್ ಸಿಂಗ್ ಅವರನ್ನು ಮೊದಲ ಟೆಸ್ಟ್ ಕ್ರಿಕೆಟಿಗನಾಗಿ ಇತಿಹಾಸದ ಪುಟದಲ್ಲಿ ಸೇರ್ಪಡೆಗೊಳಿಸಲಾಗಿದೆ.
ಅಮರ್ ಸಿಂಗ್ ಮತ್ತು ಮೊಹಮ್ಮದ್ ನಿಸ್ಸಾರ್ ಭಾರತದ ಶ್ರೇಷ್ಠ ಪಾರ್ಟ್’ನರ್ಸ್ ಎಂದು ಪರಿಗಣಿಸಲಾಗಿದೆ. ಅಂದಹಾಗೆ ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಅಮರ್ ಸಿಂಗ್.
ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತದ ಪರ ಮೊದಲ ಅರ್ಧಶತಕ ಬಾರಿಸಿದ್ದೂ ಇವರೇ. 1932 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಎರಡೂ ಸಾಧನೆಗಳನ್ನು ಮಾಡಿದ್ದರು.
ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ವಾಲ್ಟರ್ ರೆಜಿನಾಲ್ಡ್ ಹ್ಯಾಮಂಡ್ ಕೂಡ ಅಮರ್ ಬಗ್ಗೆ ಹೇಳಿಕೆ ನೀಡಿದ್ದು, "ನಾನು ನೋಡಿದಂತಹ ಅಪಾಯಕಾರಿ ಆರಂಭಿಕ ಬೌಲರ್ ಈತ" ಎಂದು ಬಣ್ಣಿಸಿದ್ದರು.
ಇನ್ನು ಅಮರ್ ಸಿಂಗ್ ರಣಜಿ ಕ್ರಿಕೆಟ್’ನಲ್ಲಿ 100 ವಿಕೆಟ್’ಗಳನ್ನು ಪಡೆದ ಮೊದಲ ಕ್ರಿಕೆಟಿಗ. ಅಷ್ಟೇ ಅಲ್ಲದೆ, ಲಂಕಾಶೈರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಕೂಡ ಇವರೇ.
ಅಮರ್ ಸಿಂಗ್ ಅವರ ಹಿರಿಯ ಸಹೋದರ ಲಾಧಾಭಾಯಿ ನಕುಮ್ ರಾಮ್ ಜಿ, ಲಾಧಾ ರಾಮ್ ಜಿ ಎಂದೇ ಪ್ರಸಿದ್ಧರಾಗಿದ್ದರು. ಇವರು ಕೂಡ ಭಾರತದ ಪರ ಒಂದು ಟೆಸ್ಟ್ ಪಂದ್ಯ ಆಡಿದ್ದಾರೆ. ಅಷ್ಟೇ ಅಲ್ಲದೆ, ಅಮರ್ ಸಿಂಗ್ ಮತ್ತು ರಾಮ್ ಜಿಯವರ ಸೋದರಳಿಯ ವಜೆಸಿಂಗ್ ಲಕ್ಷ್ಮಣ್ ನಕುಮ್ ಕೂಡ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ಆಡಿದ್ದರು.
ಅಮರ್ ಸಿಂಗ್ 1934 ರಲ್ಲಿ ಮದ್ರಾಸ್’ನಲ್ಲಿ ಇಂಗ್ಲೆಂಡ್ ವಿರುದ್ಧ 86 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಇದು ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬನ ಅತ್ಯುತ್ತಮ ಅಂಕಿ ಅಂಶವಾಗಿತ್ತು. ವಿನೂ ಮಂಕಡ್ ಅವರು 55 ರನ್’ಗೆ 8 ವಿಕೆಟ್ ಪಡೆಯುವವರೆಗೆ ಅಂದರೆ ಬರೋಬ್ಬರಿ 18 ವರ್ಷಗಳ ಕಾಲ ಈ ದಾಖಲೆಯು ಹಾಗೇ ಇತ್ತು. ಆದರೆ ಭಾರತೀಯರ ವಿಷಯಕ್ಕೆ ಬಂದರೆ, ಕಪಿಲ್ ದೇವ್ ಪಾಕಿಸ್ತಾನದ ವಿರುದ್ಧ ಮದ್ರಾಸ್’ನಲ್ಲಿ 56 ರನ್’ಗಳಿಗೆ 7 ವಿಕೆಟ್ ಪಡೆದ ನಂತರೇ ಈ ದಾಖಲೆ ಬ್ರೇಕ್ ಆಗಿದ್ದು. ಅಂದರೆ ಸುಮಾರು 46 ವರ್ಷಗಳ ಕಾಲ ಈ ದಾಖಲೆಯನ್ನು ಯಾವೊಬ್ಬ ಭಾರತೀಯನೂ ಬ್ರೇಕ್ ಮಾಡಿರಲಿಲ್ಲ.
ಇಷ್ಟೆಲ್ಲಾ ಕೊಡುಗೆ ನೀಡಿದ್ದ ಅಮರ್ ಸಿಂಗ್ ಚಿಕ್ಕ ವಯಸ್ಸಿನಲ್ಲೇ ನಿಧನರಾದರು. 29 ವರ್ಷ 169 ದಿನಗಳ ವಯಸ್ಸಿನಲ್ಲಿ ಟೈಫಾಯಿಡ್’ಗೆ ಬಲಿಯಾದ ಅಮರ್ ಸಿಂಗ್ ಅವರನ್ನು ಇಂದಿಗೂ ಕ್ರಿಕೆಟ್ ಜಗತ್ತು ನೆನಪಿಸಿಕೊಳ್ಳುತ್ತದೆ.