ಪ್ರೀತಿಸಿ ಮದುವೆ ಆಗುವುದು ಒಳ್ಳೆಯದಾ ಅಥವಾ ಅರೇಂಜ್ಡ್ ಮ್ಯಾರೇಜ್ ಒಳ್ಳೆಯದಾ? ನಿಮ್ಮ ಆಯ್ಕೆ ಯಾವುದು..?
ಪ್ರೀತಿ ಮಾಡುವುದರಿಂದ ಪ್ರಾರಂಭದಲ್ಲಿ ರಿಸ್ಕ್ ಇರುತ್ತದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಎಲ್ಲಾ ಕಡೆ ಸುತ್ತಾಡಿ, ಪ್ರೀತಿಯ ಮತ್ತಿನಲಿ ತೇಲಾಡಿ, ಸೆಲ್ಫಿ ಸೇರಿದಂತೆ ವಿವಿಧ ರೀತಿಯಲ್ಲಿ ಫೋಟೋಗಳನ್ನ ತೆಗೆದು ಖುಷಿ ಪಡುತ್ತೀರಿ. ಕೆಲವೊಮ್ಮೆ ದೇಹವನ್ನು ಅರ್ಪಿಸಿ, ನಂತರ ಕೈ ಕೊಟ್ಟು ಹೋದರೆ ಆಗುವ ಆಘಾತವನ್ನ ಒಮ್ಮೆ ನೆನಪಿಸಿಕೊಳ್ಳಿ. ಅದ್ದರಿಂದ ಎಷ್ಟೊ ಹೆಣ್ಣು-ಗಂಡುಗಳು ಪ್ರೀತಿ ಕಡಿದುಕೊಂಡಾಗ ನಲುಗಿ ಹೋಗಿದ್ದು ಇದೆ, ಪ್ರಾಣ ಕಳೆದುಕೊಂಡಿದ್ದು ಇದೆ.
ಮದುವೆ ಆದ ಮೇಲೂ ರಿಸ್ಕ್ ಇದ್ದೇ ಇದೆ. ಇದು ಇನ್ನೊಂದು ಹಂತದ ರಿಸ್ಕ್ ಅಂತಾ ಹೇಳಬಹುದು. ಪ್ರೀತಿಯ ಮತ್ತಿನಲಿ ಮದುವೆಗೂ ಮುನ್ನ ಹುಡುಗಾಟಿಕೆ ಹೆಚ್ಚು ಮಾಡುತ್ತೀರಿ. ಹೊಟೇಲಿಗೆ ಹೋಗಿದ್ದು, ಕುಣಿದದ್ದು, ತಿರುಗಿದ್ದು, ತಮಾಷೆ ಎಲ್ಲವೂ ಮದುವೆ ನಂತರ ಸಹಜವಾಗಿ ಮುಂದುವರೆಯುವ ಸಾಧ್ಯವಾಗಲ್ಲ. ಸಂಸಾರದ ನೋಗ, ಜವಾಬ್ದಾರಿ ಕೆಲವು ಸಲ ಭಾರವಾಗುತ್ತದೆ. ಆಗ ನಿಮಗೆ ಸಂಗಾತಿ ಬದಲಾದ ಹಾಗೆ ಕಾಣುತ್ತಾರೆ. ಸಣ್ಣ-ಪುಟ್ಟ ಕಲಹ ಸಹಜವಾಗಿ ನಿಮ್ಮಿಬ್ಬರ ನಡುವೆ ನಡೆಯುತ್ತದೆ. ಪ್ರೇಮ ವಿವಾಹದಲ್ಲಿ ವಿವಾಹದ ಮುಂಚೆ ಇದ್ದಂತೆಯೇ ಇರಬೇಕು ಅಂತಾ ಅಶಿಸಿದರೆ ನಿಮ್ಮ ಬದುಕಿನಲ್ಲಿ ದೊಡ್ಡ ಬಿರುಕು ಕಾಣಿಸಿಕೊಳ್ಳುತ್ತದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಭ್ರಮ ನಿರಸನ.
ಮದುವೆ ವಿಚಾರವನ್ನ ನಿಮ್ಮ ತಂದೆ-ತಾಯಿಗಳಿಗೆ ಅಯ್ಕೆ ಬಿಟ್ಟು ಬಿಡುವುದು ಕ್ಷೇಮವೇ. ಅವರು ಹುಡುಗ/ಹುಡುಗಿಯ, ಅವರ ಪೋಷಕರ ಪೂರ್ವಾಪರ, ಹಿನ್ನಲೆಯನ್ನ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಇಲ್ಲಿ ಒಂದು ರಿಸ್ಕ್ ಇದೆ. ಕೆಲವು ಬಾರಿ ಒಲ್ಲದ ಸಂಗಾತಿಯನ್ನು ಕಟ್ಟಿ ಬಿಡುವ ಸಾದ್ಯತೆ ಇರುತ್ತದೆ. ಅದಕ್ಕೆ ನೀವು ಈ ಸಲಹೆ ಪಾಲಿಸಬೇಕು. ಪೋಷಕರು ನಿಮಗೆ ಸಂಗಾತಿ ಹುಡುಕಲು ಪ್ರಾರಂಭಿಸಿದಾಗ ನಿಮ್ಮ ಅಭಿಪ್ರಾಯ, ನಿಮ್ಮ ಸಂಗಾತಿ ಹೇಗಿರಬೇಕು ಅನ್ನೋದರ ಬಗ್ಗೆ ನಿಮ್ಮ ತಂದೆ-ತಾಯಿಗೆ ತಿಳಿಸಬೇಕು. ಇದಾಗದಿದ್ದರೆ ನಿಮ್ಮ ಬಳಿ ಸಲುಗೆ ಇರುವವರ ಕಿವಿಗೆ ಹಾಕಬೇಕು. ಅದು ನಿಮ್ಮ ಪೊಷಕರಿಗೆ ತಲುಪವಂತೆ ನೊಡಿಕೊಳ್ಳಬೇಕು. ನಿಮ್ಮ ಇಚ್ಛೆಯಂತೆ ಅವರು ಪ್ರಯತ್ನ ಮಾಡುತ್ತಾರೆ. ಒಪ್ಪಿಗೆ ಆಗದ ಸಂಗಾತಿಯನ್ನು ಬಿಲ್ ಕುಲ್ ನಿರಾಕರಿಸಬೇಕು. ಯಾಕಂದ್ರೆ ಮುಂದೆ ಜೀವನ ಪೂರ್ತಿ ನೀವು ಹೆಣಗಬೇಕಾಗುತ್ತದೆ. ಸ್ವಲ್ಪವಾದರೂ ನಿಮ್ಮ ಅಭಿರುಚಿಗೆ ಹೊಂದಿಕೆ ಆಗಬೇಕು. ಇದನ್ನ ಪೋಷಕರಿಗೆ ಮನವರಿಕೆ ಮಾಡಬೇಕಾಗುತ್ತದೆ.
ಒಮ್ಮೆ ನಕ್ಕವನು ಅಥವಾ ನಕ್ಕವಳು ಸದಾ ನಗುತ್ತಾ ಇರಲು ಸಾಧ್ಯವಿಲ್ಲ. ಮುಗ್ದ ಮನಸ್ಸು ಇರುವಂತೆ ನಟಿಸುವವನು ಅಥವಾ ನಟಿಸುವವಳು ವ್ಯಾಘ್ರಮುಖಿಯೂ ಅಗಿರಬಹುದು. ವಿಧೇಯತೆ ತೋರಿದವನು ಅಥವಾ ತೋರುವವಳು ಅವಿಧೇಯಿಯೂ ಆಗಬಹುದು. ಸದಾ ನಂಬಿಕೆ ಇರುವಂತೆ ಕಾಣುವವನು ಅಥವಾ ಕಾಣುವವಳು ʼಕೈʼ ಸಹ ಕೊಡಬಹುದು. ಅದ್ದರಿಂದ Loveನಲ್ಲಿ ಅಪಾಯ ಜಾಸ್ಥಿ. ಈಗ ನಿಮಗೆ ಯಾವುದೋ ಬೇಕೊ ಅದನ್ನು ಅಯ್ಕೆ ಮಾಡಿಕೊಳ್ಳಿರಿ. ಯಾಕಂದ್ರೆ ಬಾವಿಗೆ ಬೀಳುವವರು ನೀವು ತಾನೇ? ಆಳವಾದ ಬಾವಿಗೆ ಬೀಳಬೇಡಿ ಅನ್ನೋದಷ್ಟೇ ನಮ್ಮ ಕಿವಿಮಾತು.
ಮದುವೆ ವಿಚಾರವನ್ನ ಮನೆಯವರ ನಿರ್ಧಾರಕ್ಕೆ ಬಿಟ್ಟು ನಿಮ್ಮ ಮನಸ್ಸಿನಂತೆ, ಆಯ್ಕೆ ಸ್ವತಂತ್ರ ಇದ್ದರೆ ನಿಮ್ಮ ಮುಂದಿನ ಜೀವನ ಉಜ್ವಲವಾಗಬಹುದು. ಮದುವೆ ಆನಂದ, ಅನುಭಂದವನ್ನು ತಂದುಕೊಡಬಹುದು. ಎಲ್ಲಾ ನಿಮ್ಮ ಗುಣ ಸ್ವಬಾವದ ಮೇಲೂ, ತೆಗೆದುಕೊಳ್ಳುವ ನಿರ್ಧಾರದ ಮೇಲೂ ಅವಲಂಬಿತವಾಗಿದೆ. ಎಚ್ಚರ.. ನೀವು ಮದುವೆಯಾಗುವುದು ಒಂದೇ ಬಾರಿ. ಯೋಚಿಸಿ ನಿರ್ಧಾರ ತೆಗೆದಕೊಳ್ಳುವುದು ನಿಮ್ಮ ದೊಡ್ಡ ಜವಾಬ್ದಾರಿಯಾಗುತ್ತದೆ. ಕಾಲ ಕಳೆದಮೇಲೆ ಮತ್ತೆ ಬರುವುದಿಲ್ಲ, ಒಮ್ಮೆ ಮದುವೆಯಾದ ಮೇಲೆ ಸಂಗಾತಿಯನ್ನ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಮದುವೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಕೊನೆಯದಾಗಿ ಹದಿಹರೆಯದ ಹೆಣ್ಣುಮಕ್ಕಳಿಗೆ ನಮ್ಮ ಸಲಹೆ ಏನು ಅಂದ್ರೆ, ಬದುಕಿನಲ್ಲಿ ಭದ್ರತೆ ಸಿಗುವತನಕ ಪ್ರೇಮ ವಿವಾಹದ ತಂಟೆಗೆ ಹೋಗಬೇಡಿ. ಇಂದು ಬಣ್ಣದ ಮಾತುಗಳಿಂದ ಬುದ್ಧಿ ಬಲಿಯದ, ಬದುಕಿನ ವಾಸ್ತವ ಅರಿಯದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ಹಾಳುಗೆಡವಿ ಕೈ ಕೊಟ್ಟು ಹೋಗುವ ಅನೇಕ ಕಾಮುಕ ಪಿಶಾಚಿಗಳು ಸಮಾಜದಲ್ಲಿದ್ದಾರೆ. ತಂದೆ-ತಾಯಿಗಳ ಅಶೋತ್ತರಗಳನ್ನು ಈಡೇರಿಸಿ, ಮೊದಲು ವಿದ್ಯಾಭ್ಯಾಸದ ಗುರಿ ಸಾಧಿಸಿ. ಈ ಮೊಬೈಲ್ ಯುಗದಲ್ಲಿ ಸೋಷಿಯಲ್ ಮೀಡಿಯಾದ ಗೀಳಿಗೆ ಬಿದ್ದು ಬಾಳು ಹಾಳು ಮಾಡಿಕೊಳ್ಳದಿರಿ.