ವಿಶ್ವಕಪ್ ಟ್ರೋಫಿ ಬಂಗಾರದ್ದಾ? ಗೆದ್ದ ತಂಡಕ್ಕೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?
ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತವನ್ನು ಈಗಾಗಲೇ ಪ್ರಕಟಿಸಲಾಗಿದೆ. ಇನ್ನು ವಿಶ್ವಕಪ್ ಗೆಲ್ಲುವ ತಂಡವು 4 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಪಡೆಯುತ್ತದೆ. ಇನ್ನು ಅಂತಿಮ ಪಂದ್ಯದಲ್ಲಿ ಸೋತ ತಂಡ, ಅಂದರೆ ರನ್ನರ್ ಅಪ್ ತಂಡ 2 ಮಿಲಿಯನ್ ಯುಎಸ್ ಡಾಲರ್ ಪಡೆಯುತ್ತದೆ.
ಈ ಬಹುಮಾನದ ಮೊತ್ತವನ್ನು ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಅಂದಾಜು 33 ಕೋಟಿ 17 ಲಕ್ಷ ರೂ. ಸಿಗಲಿದೆ. ಇನ್ನೊಂದೆಡೆ ರನ್ನರ್ ಅಪ್ ತಂಡಕ್ಕೆ 16 ಕೋಟಿ 58 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ವಿಶ್ವಕಪ್ ಗ್ರೂಪ್ ಮ್ಯಾಚ್ ಗೆದ್ದರೆ 40 ಸಾವಿರ ಡಾಲರ್ ಸಿಗುತ್ತದೆ. ಆದರೆ ಗ್ರೂಪ್ ಹಂತದ ನಂತರ ಹೊರಹಾಕಲ್ಪಟ್ಟ ತಂಡವು 1 ಲಕ್ಷ ಡಾಲರ್ ಪಡೆಯುತ್ತದೆ.
2023 ರ ವಿಶ್ವಕಪ್’ನ ಕೊನೆಯ-4 ಅಂದರೆ ಸೆಮಿಫೈನಲ್’ಗೆ ತಲುಪುವ ತಂಡವು 8 ಲಕ್ಷ ಡಾಲರ್’ಗಳನ್ನು ಪಡೆಯುತ್ತದೆ. ಈ ಮೂಲಕ ಬಹುತೇಕ ಎಲ್ಲ ತಂಡಗಳಿಗೂ ಹಣದ ಮಳೆ ಸುರಿಯಲಿದೆ. 2023ರ ವಿಶ್ವಕಪ್’ನಲ್ಲಿ ಭಾರತ ಸೇರಿದಂತೆ ಒಟ್ಟು 10 ತಂಡಗಳು ಆಡುತ್ತಿವೆ ಎಂಬುದು ಗಮನಾರ್ಹ.
ಇನ್ನೊಂದೆಡೆ ಕ್ರಿಕೆಟ್ ವಿಶ್ವಕಪ್ 2023ರ ಟ್ರೋಫಿಯ ಫೋಟೋ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ಕಂಡ ಜನರಿಗೆ ಆ ಟ್ರೋಫಿಯ ವಿನ್ಯಾಸ, ಅದರ ಆಯಾಮ, ಅದು ಚಿನ್ನದ್ದೋ? ಬೆಳ್ಳಿಯದ್ದೋ? ಹೀಗೆಲ್ಲಾ ಅನೇಕ ಪ್ರಶ್ನೆಗಳಿವೆ.
ಇನ್ನು ಈ ಟ್ರೋಫಿಯಲ್ಲಿ ಕಾಣುವ ಗೋಳವು ಕ್ರಿಕೆಟ್ ಚೆಂಡನ್ನು ಪ್ರತಿನಿಧಿಸಿದರೆ, ಅಂಕಣವು ಕ್ರಿಕೆಟ್’ನ ಮೂರು ಮೂಲಭೂತ ಅಂಶಗಳನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ, ಈ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಬೆಳ್ಳಿ ಮತ್ತು ಚಿನ್ನದಿಂದ ತಯಾರಿಸಲಾಗಿದೆ. ಟ್ರೋಫಿಯಲ್ಲಿ ಕಂಡುಬರುವ ಚೆಂಡು ಚಿನ್ನದಿಂದ ಮತ್ತು ಮೂರು ಕಂಬಗಳನ್ನು ಬೆಳ್ಳಿಯಿಂದ ತಯಾರಿಸಲಾಗಿದೆ.
ಅಂದಹಾಗೆ, ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯು ಅತ್ಯಂತ ದುಬಾರಿ ಕ್ರೀಡಾ ಟ್ರೋಫಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಟ್ರೋಫಿಯ ಅಂದಾಜು ವೆಚ್ಚ $30,000 ಆಗಿದೆ. ಅಂದರೆ 24,76,650 ರೂ.
ನಿಮಗಿದು ತಿಳಿದಿರಲಿ: ವಿಶ್ವಕಪ್ ವಿಜೇತರು ಟ್ರೋಫಿಯ ಪ್ರತಿಕೃತಿಯನ್ನು ಇಟ್ಟುಕೊಳ್ಳುತ್ತಾರೆ, ಆದರೆ ಶಾಶ್ವತ ಟ್ರೋಫಿಯನ್ನು ಯುಎಇಯಲ್ಲಿರುವ ಐಸಿಸಿ ಪ್ರಧಾನ ಕಚೇರಿಗೆ ಹಿಂತಿರುಗಿಸಲಾಗುತ್ತದೆ.