ಶೀಘ್ರವೇ ಮಾರುಕಟ್ಟೆಗೆ ಜಿಯೋಫೋನ್ ನೆಕ್ಸ್ಟ್: ಬೆಲೆ, ವೈಶಿಷ್ಟ್ಯ ತಿಳಿಯಿರಿ…
ಭಾರತದ ಅಗ್ಗದ ದರದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಪಡೆಯಲಿರುವ ಜಿಯೋಫೋನ್ ನೆಕ್ಸ್ಟ್ ಹಲವು ವಿಶೇಷತೆಗಳನ್ನು ಹೊಂದಿದೆ. ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಡುವ ಮುನ್ನವೇ ಈ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಭಾರತೀಯರು ಕೂಡ ಬಹುನಿರೀಕ್ಷಿತ ಕಡಿಮೆ ದರದ ಸ್ಮಾರ್ಟ್‌ಫೋನ್ ಬಗ್ಗೆ ಕುತೂಹಲ ಹೊಂದಿದ್ದಾರೆ. ಸಾಮಾನ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನವಾಗಿರಲಿದ್ದು, ಆಂಡ್ರಾಯ್ಡ್ 11 ಗೋ ಆವೃತ್ತಿಯೊಂದಿಗೆ ಕಾರ್ಯನಿರ್ವಹಿಸುಲಿದೆ. ಈ ಸ್ಮಾರ್ಟ್‌ಫೋನ್ ಪ್ರೀಮಿಯಂ ಸಾಮರ್ಥ್ಯಗಳನ್ನು ಹೊಂದಿದೆ ಅಂತಾ ತಿಳಿದುಬಂದಿದೆ.
ಜೂನ್‌ನಲ್ಲಿ ನಡೆದ ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಮಹಾಸಭೆಯಲ್ಲಿ ಮುಖೇಶ್ ಅಂಬಾನಿಯವರು ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಪರಿಚಯಿಸಿದ್ದರು. ಈ ವರ್ಷದ ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ಶುಭ ದಿನದಂದು ಮಾರುಕಟ್ಟೆಯಲ್ಲಿ ಜಿಯೋಫೋನ್ ನೆಕ್ಸ್ಟ್ ಲಭ್ಯವಿರುತ್ತದೆ ಅಂತಾ ತಿಳಿಸಿದ್ದಾರೆ.
ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ 5.5 ಇಂಚಿನ HD+ ಡಿಸ್‌ಪ್ಲೇ ಹೊಂದಿರುತ್ತದೆ. ಇದು 64-ಬಿಟ್ ಕ್ವಾಡ್-ಕೋರ್ ಕ್ವಾಲ್‌ಕಾಮ್ QM215 ಚಿಪ್‌ಸೆಟ್ ಹೊಂದಿದ್ದು, ಕ್ವಾಲ್‌ಕಾಮ್ ಅಡ್ರಿನೋ 308 GPU ನೊಂದಿಗೆ ಜೋಡಿಸಲಾಗಿದೆ. ಅದಲ್ಲದೇ ಚಿಪ್ ಸಮಗ್ರ X5 LTE ಮೋಡೆಮ್‌ನೊಂದಿಗೆ ಬರಲಿದೆ. 2,500 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ 2GB ಅಥವಾ 3GB RAM ನಲ್ಲಿ ಬರಲಿದೆ.
ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ GPS, EMMC 4.5 ಸ್ಟೋರೇಜ್ ಮತ್ತು ಬ್ಲೂಟೂತ್ 4.2 ಹೊಂದಿದೆ. ಸಿಂಗಲ್ ಲೆನ್ಸ್ ಕ್ಯಾಮೆರಾ ಸೆಟಪ್‌ನೊಂದಿಗೆ ಜಿಯೋಫೋನ್ ನೆಕ್ಸ್ಟ್ ಗ್ರಾಹಕರ ಕೈ ಸೇರಲಿದೆ. ಸಿಂಗಲ್ ಲೆನ್ಸ್ 13 MP ಸೆನ್ಸಾರ್ ಕ್ಯಾಮೆರಾ ಹೊಂದಿದ್ದರೆ, ಸೆಲ್ಫಿ ಕ್ಯಾಮೆರಾ 8MP ರೆಸಲ್ಯೂಶನ್ ಹೊಂದಿರುತ್ತದೆ.
ರಿಲಾಯನ್ಸ್ ಜಿಯೋ ಇದುವರೆಗೂ ಅಧಿಕೃತವಾಗಿ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಘೋಷಿಸಿಲ್ಲ. ಆದರೆ 3,499 ರೂ. ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ ಅಂತಾ ಹೇಳಲಾಗುತ್ತಿದೆ.
ರಿಲಯನ್ಸ್ ಜಿಯೋ ಮತ್ತು ಗೂಗಲ್ ಜಂಟಿಯಾಗಿ ‘ಮೇಡ್ ಫಾರ್ ಇಂಡಿಯಾ ಸ್ಮಾರ್ಟ್‌ಫೋನ್ - ಜಿಯೋಫೋನ್ ನೆಕ್ಸ್ಟ್’ ಅನ್ನು ಅಭಿವೃದ್ಧಿಪಡಿಸಿವೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಿಯೋಫೋನ್ ನೆಕ್ಸ್ಟ್ ಸಖತ್ ಸೌಂಡ್ ಮಾಡಲಿದೆ ಅಂತಾ ಹೇಳಲಾಗುತ್ತಿದೆ. ಗ್ರಾಹಕರು ಕೂಡ ಈ ಫೋನ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.