`ಕನ್ನಡವೇ ಉಸಿರು... ಕನ್ನಡ ಬಿಟ್ಟು ಬೇರೆ ಸಿನಿಮಾನೇ ಮಾಡಲ್ಲ` ಅಂತಿದ್ದ ರಾಜ್‌ಕುಮಾರ್ ತೆಲುಗು ಸಿನಿಮಾದಲ್ಲೂ ಅಭಿನಯಿಸಿದ್ರು! ಆ ಸೂಪರ್ ಹಿಟ್ ಚಿತ್ರ ಯಾವುದು?
ಕನ್ನಡವಷ್ಟೇ ಅಲ್ಲ, ಭಾರತ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಅಂತಿಂಥದಲ್ಲ. ರಾಜ್ ಕುಮಾರ್ ಅನ್ನೋದಕ್ಕಿಂತ ಅಣ್ಣಾವ್ರು ಎಂದೇ ಸಂಪಾದಿಸಿದ ಪ್ರೀತಿ, ವಿಶ್ವಾಸ ಮತ್ತೊಬ್ಬ ನಟನಿಗೆ ತಮ್ಮ ಜೀವಮಾನದಲ್ಲಿ ಸಿಕ್ಕಿರಲಿಕ್ಕಿಲ್ಲವೇನೋ...
ಸುಮಾರು 200ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿರುವ ಡಾ. ರಾಜ್ ಕುಮಾರ್ ಅವರು ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್. ಪ್ರತಿಯೊಂದು ಸಿನಿಮಾವೂ ಅರ್ಥಗರ್ಭಿತ ಮತ್ತು ಸಂದೇಶವುಳ್ಳದ್ದೇ ಆಗಿರುತ್ತಿತ್ತು.
ಕನ್ನಡವೇ ಪ್ರಾಣ, ಕನ್ನಡವೇ ಉಸಿರು ಅನ್ನುತ್ತಿದ್ದ ರಾಜ್ ಕುಮಾರ್ ಬೇರೆ ಸಿನಿಮಾ ಇಂಡಸ್ಟ್ರಿಗಳಿಂದ ಭಾರಿ ಬೇಡಿಕೆ ಬರುತ್ತಿದ್ದರೂ ಸಹ, ಕನ್ನಡ ಬಿಟ್ಟು ಬೇರೆ ಭಾಷೆಯತ್ತ ಗಮನಹರಿಸಿದವರಲ್ಲ.
ಆದರೆ ರಾಜ್‌ಕುಮಾರ್ ತೆಲುಗಿನಲ್ಲಿ ಒಂದು ಚಿತ್ರ ಮಾಡಿದ್ದಾರೆ. ಕೇವಲ ಕನ್ನಡಕ್ಕಷ್ಟೇ ಸೀಮಿತರಾಗಿದ್ದ ಅಣ್ಣಾವ್ರು ನಟಿಸಿದ ಚಿತ್ರವೊಂದು ರಿಮೇಕ್ ಆಗಿತ್ತು. ಆ ಸಿನಿಮಾ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಬ್ಲಾಕ್‌ಬಸ್ಟರ್ ಆಗಿತ್ತು.
ಅಂದಹಾಗೆ ರಾಜ್‌ಕುಮಾರ್ ನಟಿಸಿದ ಏಕೈಕ ತೆಲುಗು ಚಿತ್ರ ʼಕಾಳಹಸ್ತಿ ಮಹಾತ್ಮೆʼ. ಭಕ್ತಿಪ್ರಧಾನ ಚಿತ್ರ ಇದು ಬೇಡರ ಕಣ್ಣಪ್ಪ ಚಿತ್ರದ ರಿಮೇಕ್. ಈ ಚಿತ್ರವನ್ನು ಹೆಚ್. ಎಲ್. ಎನ್. ಸಿಂಹಾ ನಿರ್ದೇಶನ ಮಾಡಿದ್ದು, ರಾಜ್ ಕುಮಾರ್ ನಾಯಕನಾಗಿ ನಟಿಸಿದ್ದರು.
ಇವರ ಜೊತೆಗೆ ಮಾಲತಿ, ರತನ್, ಕುಶಾಲ ಕುಮಾರಿ, ಮುದಿಗೊಂಡ ಲಿಂಗಮೂರ್ತಿ, ಕುಮಾರಿ, ಪದ್ಮನಾಭಂ, ಹೆಚ್. ಆರ್. ರಾಮಚಂದ್ರ ಶಾಸ್ತ್ರಿ, ರುಷ್ಯೇಂದ್ರಮಣಿ, ರಾಜಸುಲೋಚನ ನಟಿಸಿದ್ದಾರೆ. ಸಿ.ಆರ್. ಬಸವರಾಜು, ಗುಬ್ಬಿ ವೀರಣ್ಣ ನಿರ್ಮಿಸಿರುವ ಈ ಸಿನಿಮಾ ಪೂರ್ತಿ ಸಂಗೀತಮಯವಾಗಿದೆ.