Kamala Harris ಪದಗ್ರಹಣಕ್ಕೂ ಮುನ್ನವೇ ಆಚರಣೆ : ಹೇಗಿತ್ತು ಸ್ವಗ್ರಾಮದಲ್ಲಿ ಸಂಭ್ರಮ..!
ತುಳಸೇಂದ್ರಪುರಂ ಗ್ರಾಮವು ತಮಿಳುನಾಡಿನ ಚೆನ್ನೈನಿಂದ ದಕ್ಷಿಣಕ್ಕೆ 320 ಕಿ.ಮೀ ದೂರದಲ್ಲಿದೆ. ತುಳಸೇಂದ್ರಪುರಂನಲ್ಲಿ ಕಮಲಾ ಹ್ಯಾರಿಸ್ ಅವರ ತಾತ ನೆಲೆಸಿದ್ದರು. ಕಮಲಾ ಹ್ಯಾರಿಸ್ ಅವರ ತಾಯಿಯ ಜನನ ಕೂಡಾ ಇದೇ ಗ್ರಾಮದಲ್ಲಿ ಆಗಿರುವುದು.
ಕಮಲಾ ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸುವ ಮೊದಲೇ ಜನರು ತುಳಸೇಂದ್ರಪುರಂ ಗ್ರಾಮದ ದೇವಸ್ಥಾನದಲ್ಲಿ ಜಮಾಯಿಸಿದ್ದರು. ಕಮಲಾ ಹ್ಯಾರಿಸ್ ತಮ್ಮ ಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಹೊಂದಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಕಮಲಾ ಹ್ಯಾರಿಸ್ ಅವರ ತಾಯಿ ಭಾರತದ ಪ್ರಜೆ ಮತ್ತು ತಂದೆ ಜಮೈಕಾದ ನಿವಾಸಿ. ಇಬ್ಬರೂ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿ ವಿವಾಹವಾಗಿದ್ದರು. ಕಮಲಾ ಹ್ಯಾರಿಸ್ 5 ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದಿದ್ದರು. ಆ ಸಮಯದಲ್ಲಿ ಅವರು ತನ್ನ ಅಜ್ಜನ ಜೊತೆ ಚೆನ್ನೈನ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ಅಮೆರಿಕಾದ ಇತಿಹಾಸದಲ್ಲೇ ಉಪಾಧ್ಯಕ್ಷರಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ಅಲ್ಲದೆ ಈ ಸ್ಥಾನವನ್ನುಅಲಂಕರಿಸಿರುವ ಮೊದಲ ಏಷ್ಯನ್-ಅಮೇರಿಕನ್ ಪ್ರಜೆ. ಉಪಾಧ್ಯಕ್ಷ ಸ್ಥಾನ ಅಂದರೆ, ಅಧ್ಯಕ್ಷರ ನಂತರ ಅಮೆರಿಕದ ಎರಡನೇ ಅತ್ಯುನ್ನತ ಹುದ್ದೆ ಎಂದು ಪರಿಗಣಿಸಲಾಗಿದೆ.
ಕಮಲಾ ಹ್ಯಾರಿಸ್ ಯುಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ತುಳಸೇಂದ್ರಪುರಂನಲ್ಲಿ ಮಹಿಳೆಯರು ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸಂಭ್ರಮಿಸಿದರು. ತುಳಸೇಂದ್ರಪುರಂ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ. ಜನರು ಕಮಲಾ ಹ್ಯಾರಿಸ್ ಅವರ ಪೋಸ್ಟರ್‌ಗಳನ್ನು ಹಿಡಿದುಕೊಂಡು, ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಅಭಿನಂದಿಸುತ್ತಿದ್ದರು. ಪಟಾಕಿ ಸಿಡಿಸುವ ಮೂಲಕ ಸಂಭ್ರಮ ಪಟ್ಟರು.