ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆ: 50 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಒಪ್ಪಂದಕ್ಕೆ ಸಿಎಂ ಸಹಿ
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಭಾರ್ತಿ ಎಂಟರ್ ಪ್ರೈಸಸ್ ನ ಸಿಇಒ ಸುನೀಲ್ ಭಾರ್ತಿ ಮಿತ್ತಲ್ ಮತ್ತಿತರನ್ನು ಭೇಟಿಯಾದ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿನ ಹೂಡಿಕೆ ಅವಕಾಶ ಕುರಿತಂತೆ ಮಹತ್ವದ ಚರ್ಚೆ ನಡೆಸಿದರು. ಭಾರ್ತಿ ಎಂಟರ್ ಪ್ರೈಸಸ್ ರಾಜ್ಯದಲ್ಲಿ ಮೆಗಾ ಡಾಟಾ ಸೆಂಟರ್ ಸ್ಥಾಪನೆಗೆ ಯೋಜಿಸಿದ್ದು, ಸರ್ಕಾರದಿಂದ ಸಂಪೂರ್ಣ ಸಹಕಾರ ಒದಗಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ, ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ, ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಉತ್ಸುಕತೆ ತೋರಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನೆಸ್ಟ್ಲೆಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಟ್ಲೆ ಸಂಸ್ಥೆ ಮುಂದಾಗಿದೆ.
ಮೆ: ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ. 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿತು.
ಕರ್ನಾಟಕವು ದೃಢವಾದ ಆಹಾರ ಸಂಸ್ಕರಣಾ ವಲಯಕ್ಕೆ ನೆಲೆಯಾಗಿದೆ ಮತ್ತು ಜುಬಿಲೆಂಟ್ ಗ್ರೂಪ್ ಕೇಂದ್ರ ಅಡುಗೆಮನೆ ಮತ್ತು ಆರ್ & ಡಿ ಕೇಂದ್ರಕ್ಕಾಗಿ ರಾಜ್ಯದಲ್ಲಿ 700 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ.