Karnataka Rain: ರಾಜ್ಯದಲ್ಲಿ ವರುಣ ಎಂಟ್ರಿಗೆ ಕ್ಷಣಗಣನೆ: ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ಸೂಚನೆ
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಕೆಲವೆಡೆ ಮಳೆಯಾಗಿದೆ. ಬಾಗಲಕೋಟೆಯ ಮಹಾಲಿಂಗಪುರ, ಬೆಳಗಾವಿಯ ಅಥಣಿ, ಮೈಸೂರಿನ ಹುಣಸೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಳೆಯಾಗಿದೆ ಎಂದು ವರದಿಯಾಗಿದೆ.
ಚಾಮರಾಜನಗರದಲ್ಲಿ 28 ಹೆಕ್ಟೇರ್, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ತಲಾ ಒಂದು ಹೆಕ್ಟೇರ್ ಸೇರಿದಂತೆ 16 ಜಿಲ್ಲೆಗಳಲ್ಲಿ 9,398 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಇದಲ್ಲದೆ 795 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟಾರೆಯಾಗಿ, 155 ದೊಡ್ಡ ಮತ್ತು 183 ಸಣ್ಣ ಸಾಕುಪ್ರಾಣಿಗಳು ಮಳೆಯಿಂದಾಗಿ ಪ್ರಾಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಮಳೆಯಿಂದ 1,446 ವಿದ್ಯುತ್ ಕಂಬಗಳು ಮತ್ತು 249 ಟ್ರಾನ್ಸ್‌ಫಾರ್ಮರ್ ಗಳು ಹಾನಿಗೊಳಗಾಗಿವೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡಕವಿದ ವಾತಾವರಣ ನಿರ್ಮಾಣ ಆಗಿದೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮತ್ತೊಂದೆಡೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು,ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲೂ ಕೂಡ ಮಳೆ ಸುರಿಯುವ ಸಂಭವ ಇದೆ.