Rain Alert: ಮುಂದಿನ 2 ದಿನಗಳ ಕಾಲ ರಾಜ್ಯದ ಈ ಭಾಗದಲ್ಲಿ ಭಾರೀ ಮಳೆ! ಗುಡುಗು, ಮಿಂಚು ಸಹಿತ ಬಿರುಗಾಳಿಯ ಮುನ್ನೆಚ್ಚರಿಕೆ
ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗುಜರಾತ್ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಚಂಡಮಾರುತವು ಮುಂಗಾರು ಆಗಮನಕ್ಕೆ ಅಡ್ಡಿಯಾಗಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಜೂನ್ 8 ಅಥವಾ 9 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಬಹುದು. ಆದರೆ ಅದು ಬಲವಾಗಿರುವುದಕ್ಕಿಂತ ದುರ್ಬಲವಾಗಿರುತ್ತದೆ ಎಂದು ಹೇಳಲಾಗಿದೆ.
ಈ ಚಂಡಮಾರುತಕ್ಕೆ ಬೆಂಗಾಲಿ ಭಾಷೆಯಲ್ಲಿ ಬಿಪರ್ಜೋಯ್ (ವಿಪತ್ತು) ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶವು ಈ ಹೆಸರನ್ನು ಸೂಚಿಸಿದೆ. ಈ ಚಂಡಮಾರುತದ ಪ್ರಭಾವದಿಂದಾಗಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ
ಈ ಚಂಡಮಾರುತವು ಗೋವಾದ ನೈಋತ್ಯಕ್ಕೆ 950 ಕಿಮೀ, ಮುಂಬೈನಿಂದ 1,100 ಕಿಮೀ ದೂರದಲ್ಲಿದೆ. ಇನ್ನು ಪೋರಬಂದರ್ ನಿಂದ 1,490 ಕಿ.ಮೀ. ದೂರದಲ್ಲಿ ಕಂಡುಬಂದಿದೆ. ಈ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಜೂನ್ 8 ರಂದು ಗೋವಾ, ಮಹಾರಾಷ್ಟ್ರದ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿತ್ತು.
ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರರು ನೀರಿಗಿಳಿಯದಂತೆ ಮತ್ತು ದಡಕ್ಕೆ ಮರಳುವಂತೆ ಎಚ್ಚರಿಕೆ ನೀಡಲಾಗಿದೆ. ದಿನ ಕಳೆದಂತೆ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಹೆಚ್ಚಿರುವುದರಿಂದ ಅದು ಭಾರತದ ಯಾವ ಕರಾವಳಿಗೆ ಅಪ್ಪಳಿಸಬಹುದು ಎಂಬುದು ಸ್ಪಷ್ಟವಾಗಿಲ್ಲ. ಈ ಚಂಡಮಾರುತವು ಈ ಹಿಂದೆ ಹವಾಮಾನ ಇಲಾಖೆ ಅಂದಾಜಿಸಿದಂತೆ ಜೂನ್ 3 ರಂದು ಆಗಮಿಸಬೇಕಿದ್ದ ಮುಂಗಾರು ವಿಳಂಬಕ್ಕೂ ಕಾರಣವಾಗಿದೆ. ಈಗ ಮುಂಗಾರು ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗುತ್ತಿದ್ದು, ನಿಖರ ದಿನಾಂಕವನ್ನು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿಲ್ಲ.