ಈ ಹಳ್ಳಿಯಲ್ಲಿ ಹೆಚ್ಚಿದೆ ಅವಳಿ ಮಕ್ಕಳ ಸಂಖ್ಯೆ: ಕಾರಣ ಇನ್ನೂ ನಿಗೂಢ
ಕೇರಳದ ಮಲಪ್ಪುರಂ ಜಿಲ್ಲೆಯ ಕೊಡಿನ್ಹಿ ಗ್ರಾಮದ ಬಗ್ಗೆ ಇಂದು ಮಾತನಾಡುತ್ತಿದ್ದೇವೆ. ಈ ಹಳ್ಳಿಯ ಅವಳಿ ಮಕ್ಕಳನ್ನು ನೋಡಲು ದೇಶದ ಎಲ್ಲೆಡೆಯಿಂದ ಜನರು ಆಗಮಿಸುತ್ತಾರೆ. ಇದು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ. ಈ ಗ್ರಾಮದ ಬಹುತೇಕ ಕುಟುಂಬಗಳಲ್ಲಿ ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಹಳ್ಳಿಯಲ್ಲಿ ಇಷ್ಟೊಂದು ಅವಳಿ ಮಕ್ಕಳು ಹುಟ್ಟಿದ್ದು ಏಕೆ? ಇದರ ಬಗ್ಗೆ ತಿಳಿದುಕೊಳ್ಳಲು ಅನೇಕ ವಿಜ್ಞಾನಿಗಳು ಇಲ್ಲಿಗೆ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಅದು ನಿಗೂಢವಾಗಿಯೇ ಉಳಿದಿದೆ.
ಈ ಗ್ರಾಮದ ಮೇಲೆ ದೇವರ ವಿಶೇಷ ಕೃಪೆ ಇದೆ ಎಂದು ಇಲ್ಲಿನ ಸ್ಥಳೀಯ ಜನರು ನಂಬುತ್ತಾರೆ. ಇದರಿಂದಾಗಿ ಇಲ್ಲಿನ ಬಹುತೇಕ ಮಕ್ಕಳು ಅವಳಿ ಮಕ್ಕಳು. ವರದಿ ಪ್ರಕಾರ ಕಳೆದ 50 ವರ್ಷಗಳಲ್ಲಿ ಈ ಗ್ರಾಮದಲ್ಲಿ 300ಕ್ಕೂ ಹೆಚ್ಚು ಅವಳಿ ಮಕ್ಕಳು ಜನಿಸಿದ್ದಾರೆ.
2008 ರಲ್ಲಿ, ಗ್ರಾಮದಲ್ಲಿ 280 ಅವಳಿ ಮಕ್ಕಳಿರುವ ಅಧಿಕೃತ ಅಂದಾಜನ್ನು ಬಿಡುಗಡೆ ಮಾಡಲಾಯಿತು. ಆದರೆ ಅಂದಿನಿಂದ ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮಾಧ್ಯಮ ವರದಿಗಳ ಪ್ರಕಾರ, ವಿಶ್ವದ 1000 ಮಕ್ಕಳಲ್ಲಿ 9 ಅವಳಿ ಮಕ್ಕಳು ಇದ್ದಾರೆ. ಆದರೆ ಈ ಗ್ರಾಮದ 1000 ಮಕ್ಕಳಲ್ಲಿ 45 ಅವಳಿ ಮಕ್ಕಳು.
ಈ ಗ್ರಾಮದ ಗಾಳಿ-ನೀರಿನಲ್ಲಿ ಏನೋ ಇದೆ. ಅದರಿಂದಾಗಿಯೇ ಇಲ್ಲಿನ ಹೆಚ್ಚು ಜನರ ಮನೆಗಳಲ್ಲಿ ಅವಳಿ ಮಕ್ಕಳು ಜನಿಸುತ್ತಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ.
ಪ್ರಪಂಚದಾದ್ಯಂತದ ವಿಜ್ಞಾನಿಗಳು ಈ ಗ್ರಾಮದಲ್ಲಿ ಸಂಶೋಧನೆ ನಡೆಸಿದ್ದಾರೆ. 2016 ರಲ್ಲಿ, ಭಾರತ, ಲಂಡನ್ ಮತ್ತು ಜರ್ಮನಿಯಿಂದ ಸಂಶೋಧಕರ ತಂಡವು ತನಿಖೆಗಾಗಿ ಈ ಗ್ರಾಮಕ್ಕೆ ಆಗಮಿಸಿತು. ಗ್ರಾಮದ ಜನರ ಡಿಎನ್‌ಎ ಪರೀಕ್ಷೆ ಮಾಡಿದರು. ಆದರೆ ಸಾಕಷ್ಟು ಪ್ರಯತ್ನ ಮತ್ತು ಸಂಶೋಧನೆಯ ನಂತರವೂ ವಿಜ್ಞಾನಿಗಳು ಇಲ್ಲಿನ ರಹಸ್ಯವನ್ನು ಭೇದಿಸಲು ಸಾಧ್ಯವಾಗಲಿಲ್ಲ