ಟ್ರೋಲಿಗರ ಚಳಿ ಬಿಡಿಸಿದ ಕಿಚ್ಚ ಸುದೀಪ್ ಅಭಿಮಾನಿಗಳು; ಅಷ್ಟಕ್ಕೂ ಆಗಿದ್ದೇನು?
ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇದರ ಬೆನ್ನಲ್ಲೇ ʼಜೀ ಕನ್ನಡ ವಾಹಿನಿʼಯ ಜನಪ್ರಿಯ ಸರಿಗಮಪ ಶೋನಲ್ಲಿ ಭಾಗಿಯಾಗಿದ್ದರು. ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿದ್ದ ಕಳೆದ ವೀಕೆಂಡ್ ಎಪಿಸೋಡ್‌ಗಳು ಸಖತ್ ಸದ್ದು ಮಾಡಿದೆ. ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಸಹ ವೇದಿಕೆಯ ಕಳೆ ಹೆಚ್ಚಿಸಿದ್ದರು.
ಸರಿಗಮಪ ಶೋಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟಿದ್ದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹಾಡು ಹಾಡಿ ರಂಜಿಸಿದರು. ಅಷ್ಟು ದೊಡ್ಡ ವೇದಿಕೆಯಲ್ಲಿ ಮಗಳ ಹಾಡಿದ್ದನ್ನು ಕಣ್ತುಂಬಿಕೊಂಡ ಸುದೀಪ್ ಖುಷಿಯಾದರು. ಆನಂದದಿಂದ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು. ಇಡೀ ಫ್ಯಾಮಿಲಿ ವೇದಿಕೆಗೆ ಆಗಮಿಸಿ ಅಭಿಮಾನಿಗಳ ಮನಗೆದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಸಾನ್ವಿ ಕನ್ನಡ ಮಾತನಾಡದೇ ಇಂಗ್ಲಿಷ್ ಮಾತನಾಡಿದರು ಅಂತಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 3 ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಾನ್ವಿ ಟ್ರೋಲ್ ಆಗುತ್ತಿದ್ದಾರೆ. 'ಜಸ್ಟ್ ಮಾತ್ ಮಾತಲ್ಲಿ' ಹಾಡು ಹಾಡಿ ಚಪ್ಪಾಳೆ ಗಿಟ್ಟಿಸಿದರೂ ಸಾನ್ವಿ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡುವುದು ಬೇಡವೇ? ನಟ ಸುದೀಪ್ ಅವರು ತಮ್ಮ ಮಗಳಿಗೆ ಕನ್ನಡ ಹೇಳಿಕೊಟ್ಟಿಲ್ವಾ? ಸಾನ್ವಿಗೆ ಕನ್ನಡ ಮಾತನಾಡಲು ಬರಲ್ವಾ? ಅಥವಾ ಬೇಕಂತಲೇ ಮಾತನಾಡಲಿಲ್ವಾ? ಅಂತಾ ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಕೆಲವು ನಟ ಸುದೀಪ್ ಅಭಿಮಾನಿಗಳು ಸಹ ಸಾನ್ವಿ ಕನ್ನಡದಲ್ಲಿ ಮಾತನಾಡಲಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಕಾನ್ವೆಂಟ್‌ನಲ್ಲೇ ಓದಿರಬಹುದು, ಆದರೆ ಸರಿಗಮಪ ಅಚ್ಚ ಕನ್ನಡದ ಕಾರ್ಯಕ್ರಮ. ಅಂತಹ ವೇದಿಕೆಯಲ್ಲಿ ಮಾತೃಭಾಷೆಯಲ್ಲಿ ಮಾತನಾಡಬಹುದಿತ್ತು ಅಂತಾ ಟ್ರೋಲ್ ಮಾಡಲಾಗುತ್ತಿದೆ. ಸ್ವತಃ ನಟ ಸುದೀಪ್ ಅವರೇ ಸಾಕಷ್ಟು ಸಂದರ್ಭಗಳಲ್ಲಿ ಬೇರೆಯವರಿಗೆ ಕನ್ನಡದ ಪಾಠ ಮಾಡಿದ್ದಾರೆ. ಆದರೆ ಮಗಳಿಗೆ ಅವರು ಕನ್ನಡದಲ್ಲಿ ಮಾತನಾಡುವಂತೆ ಹೇಳಬಹುದಿತ್ತಲ್ಲವೆಂದು ಪ್ರಶ್ನಿಸುತ್ತಿದ್ದಾರೆ.
ಪರಭಾಷಿಕರು 'ಕನ್ನಡ್' ಎಂದಾಗ 'ಅದು ಕನ್ನಡ್ ಅಲ್ಲ ಕನ್ನಡ' ಎಂದು ನಟ ಸುದೀಪ್ ಅವರು ಅನೇಕ ವೇದಿಕೆಗಳಲ್ಲಿ ತಿದ್ದಿ ಹೇಳಿದ್ದರು. ಬಿಗ್ ಬಾಸ್ ಸ್ಪರ್ಧಿಗಳು ಕನ್ನಡ ಬಿಟ್ಟು ಹೆಚ್ಚು ಇಂಗ್ಲಿಷ್ ಮಾತನಾಡಿದಾಗ ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಇದೆಲ್ಲದರ ನಡುವೆ ಸಾನ್ವಿ ಅವರು ಸರಿಗಮಪ ಶೋನಲ್ಲಿ ಏಕೆ ಕನ್ನಡ ಮಾತನಾಡಲಿಲ್ಲ? ಅಂತಾ ಅನೇಕ ಜನರು ಕೇಳುತ್ತಿದ್ದಾರೆ. 10 ನಿಮಿಷ ವೇದಿಕೆ ಮೇಲಿದ್ದ ಸಾನ್ವಿ ʼಪ್ರತಿವರ್ಷʼ ಅನ್ನೋ ಒಂದೇ ಒಂದು ಕನ್ನಡ ಪದ ಬಳಸಿದ್ದಾರೆ. ಅದು ಬಿಟ್ಟರೆ ಅವರು ಮಾತನಾಡಿರುವುದು ಎಲ್ಲಾ ಇಂಗ್ಲಿಷಿನಲ್ಲೇ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರಿಗೆ ನೇಮು ಫೇಮು ಸಿಕ್ಕಿದ್ದು ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಂದ ಅಲ್ಲವೇ? ಮಗಳಿಗೆ ಅವರು ಏಕೆ ಕನ್ನಡ ಹೇಳಿಕೊಟ್ಟಿಲ್ಲವೆಂದು ಕೆಲವರು ಖಾರವಾಗಿ ಪ್ರಶ್ನಿಸಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರ ನೂರಾರು ಅಭಿಮಾನಿಗಳು ಸಾನ್ವಿ ಬೆಂಬಲಕ್ಕೆ ನಿಂತು ಸಮರ್ಥಿಸಿಕೊಂಡಿದ್ದಾರೆ. ಸಾನ್ವಿ ಈ ಕಾಲದ ಹುಡುಗಿ, ಅಷ್ಟು ಚೆನ್ನಾಗಿ ಕನ್ನಡದ ಹಾಡು ಹಾಡಿದ್ದಾಳೆ. ಸುಖಾಸುಮ್ಮನೆ ಟ್ರೋಲ್ ಮಾಡುವುದು ಏಕೆ? ಅಂತಾ ಪ್ರಶ್ನಿಸಿದ್ದಾರೆ. ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲವೆಂದು ಟ್ರೋಲಿಗರ ಚಳಿ ಬಿಡಿಸಿದ್ದಾರೆ.
ಕನ್ನಡ ಮಾತನಾಡದೆ ಇಂಗ್ಲಿಷ್ ಮಾತನಾಡಿದ್ದಾರೆ ಅನ್ನೋದು ಒಂದು ಕಾರಣವಾದರೆ, ಇನ್ನೂ ಕೆಲವರು ಸರಿಗಮಪ ಶೋಗೆ ಸಾನ್ವಿ ಅವರು ಹರಿದ ಜೀನ್ಸ್ ಪ್ಯಾಂಟ್ ತೊಟ್ಟು ಬಂದಿದ್ದರು. ಕನ್ನಡದ ಕಾರ್ಯಕ್ರಮಕ್ಕೆ ಈ ರೀತಿಯ ಹರಿದ ಪ್ಯಾಂಟ್ ತೊಟ್ಟು ಬರುವುದು ಎಷ್ಟು ಸರಿ ಅಂತಾ ಅನೇಕರು ಪ್ರಶ್ನಿಸಿದ್ದು, ಟ್ರೋಲ್ ಸಹ ಮಾಡಿದ್ದಾರೆ.