ಸಿನಿಮಾಗೋಸ್ಕರ ಅಲ್ಲ... ಬದಲಾಗಿ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಬಿಡಲು ಇದೇ ನಿಜವಾದ ಕಾರಣ! ಸಂದರ್ಶನದಲ್ಲಿ ಅಸಲಿ ಸತ್ಯ ಬಹಿರಂಗಪಡಿಸಿದ ನಟ
ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಸೀಸನ್ ಪ್ರಾರಂಭವಾಗಿ ಒಂದಷ್ಟು ದಿನಗಳ ಬಳಿಕ ಕಿಚ್ಚ ಸುದೀಪ್, ತಾನು ಮುಂದಿನ ಸೀಸನ್‌ನಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತು
ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ಕಿಚ್ಚ, ಬಿಗ್ ಬಾಸ್ ಬಿಡುವುದರ ಹಿಂದಿನ ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ʼಮ್ಯಾಕ್ಸ್ʼ ಸಿನಿಮಾದ ಪ್ರಚಾರದ ಅಂಗವಾಗಿ ʼದಿ ಹಿಂದೂʼ ಜತೆ ಮಾತನಾಡಿರುವ ಕಿಚ್ಚ, ಬಿಗ್ ಬಾಸ್ ಹೋಸ್ಟ್ ಕೈಬಿಟ್ಟ ಬಗ್ಗೆ ಮಾತನಾಡಿದ್ದಾರೆ.
“ಟ್ವೀಟ್ ಮಾಡಿದ ದಿನದಂತು ನಾನು ದಣಿದಿದ್ದೆ. ಒಂದು ವೇಳೆ ಆ ಸಮಯದಲ್ಲಿ ನಾನು ಟ್ವೀಟ್ ಮಾಡದಿದ್ದರೆ ಬಹುಶಃ ಮರುದಿನಕ್ಕೆ ನನ್ನ ಆಲೋಚನೆ ಬೇರೆಯೇ ಆಗಿರುತ್ತಿತ್ತು ಅನಿಸುತ್ತದೆ. ನನಗೆ ನಾನೇ ಹಾಕಿಕೊಂಡ ಬದ್ಧತೆ ಏನೆಂದರೆ, ಏನು ಆಲೋಚನೆ ಬರುತ್ತದೋ ಅದನ್ನು ಅದೇ ಕ್ಷಣದಲ್ಲಿ ಮಾಡಿ ಮುಗಿಸುವುದು. ಅಂತೆಯೇ ಬಿಗ್ ಬಾಸ್ ಬಿಡುವ ಆಲೋಚನೆ ಬಂದ ಬಳಿಕ ಆ ಸಮಯದಲ್ಲೇ ಅದನ್ನು ಟ್ವೀಟ್ ಮಾಡಿದ್ದೆ"ಎಂದಿದ್ದಾರೆ.
“ನನಗೆ ಬಿಗ್ ಬಾಸ್ ಹೆಚ್ಚು ಗೌರವದ ಜೊತೆಗೆ ಅಪಾರ ಪ್ರೀತಿಯನ್ನು ತಂದುಕೊಟ್ಟಿದೆ. ಎಲ್ಲೋ ಒಂದು ಕಡೆ ಶೂಟಿಂಗ್ ಆಗುತ್ತಿರುವಾಗ ವೀಕೆಂಡ್‌ಗೆ ಇಲ್ಲಿಗೆ ಬರಬೇಕು. ಸಾಕಷ್ಟು ಪ್ರಯಾಣ ಮಾಡಿ ಶುಕ್ರವಾರ ಬಂದು ಎಲ್ಲಾ ಎಪಿಸೋಡ್ ನೋಡಿ ಶೋ ನಡೆಸಿಕೊಡಬೇಕು. ಇದೊಂದು ಪರಿಶ್ರಮದ ಕೆಲಸ. ಎಪಿಸೋಡ್ ನೋಡದೆ ನಿರೂಪಣೆ ಮಾಡುವುದು ನನಗೆ ಇಷ್ಟವಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ನಾನು ಹಾಕುವ ಪರಿಶ್ರಮಕ್ಕೆ ಸರಿಯಾದ ರೀತಿಯಲ್ಲಿ ಬೆಲೆ ನೀಡುವವರು ಸಹ ಬೇಕು. ಅದು ಇಲ್ಲಿ ಸಾಧ್ಯವಾಗದಿದ್ದಾಗ ಆ ಶ್ರಮವನ್ನು ನಾನು ಸಿನಿಮಾದ ಕೆಲಸಕ್ಕೆ ಹಾಕಲು ಇಷ್ಟಪಡುತ್ತೇನೆ” ಎಂದಿದ್ದಾರೆ.
"ನನಗಿಂತ ಬೇರೆ ಯಾರಾದರೂ ಸಹ ಈ ಶೋ ಅನ್ನು ಚೆನ್ನಾಗಿ ಮಾಡಬಲ್ಲರು, ನಾನೇ ಚೆನ್ನಾಗಿ ಮಾಡುವವನೆಂದು ಭಾವಿಸುವವನು ನಾನಲ್ಲ. ನನಗೆ ಏನಾದರೂ ಹೇಳಬೇಕೆನಿಸಿದ್ರೆ ಅದನ್ನು ನೇರವಾಗಿಯೇ ಹೇಳುತ್ತೇನೆ. ನಾನಾ ಕಾರಣ ಕೊಟ್ಟು ಕಾರ್ಡ್ಸ್ ಪ್ಲೇ ಮಾಡಲು ಬರಲ್ಲ. ನಾನು ಜನರ ಪರಿಶ್ರಮಕ್ಕೆ ಗೌರವ ಕೊಡುವ ವ್ಯಕ್ತಿ” ಎಂದು ಕಿಚ್ಚ ಹೇಳಿದ್ದಾರೆ.
“ಇತರೆ ಭಾಷೆಯ ಬಿಗ್ ಬಾಸ್‌ಗೆ ಸಿಗುವಂತಹ ಉತ್ತಮ ಮೆಚ್ಚುಗೆ ಮತ್ತು ಗೌರವ ಕನ್ನಡ ಬಿಗ್ ಬಾಸ್‌ಗೂ ಸಿಗಬೇಕು. ಆದರೆ ಇಲ್ಲಿ ಸಿಗುತ್ತಿದೆ ಎಂದು ನಾನು ಭಾವಿಸುತ್ತಿಲ್ಲ. ಇದು ಬರೀ ನನಗೆ ಸಂಬಂಧಿಸಿದಲ್ಲ. ಬೇಕಾದರೆ ಬಿಗ್ ಬಾಸ್ ಕನ್ನಡ ಮತ್ತು ಇತರ ಎಲ್ಲಾ ಭಾಷೆಯ ಶೋಗಳನ್ನು ಹೋಲಿಕೆ ಮಾಡಿ ನೋಡಿ. ನಮ್ಮ ಪ್ರೇಕ್ಷಕರು ಕೂಡ ಹೆಚ್ಚಿನ ಗೌರವಕ್ಕೆ ಅರ್ಹರಾಗಬೇಕು” ಎಂದು ಹೇಳಿದ್ದಾರೆ.
"ಇನ್ನು ನಿರೂಪಣೆ ಬಿಡುವುದರ ಹಿಂದೆ ಕೆಲವೊಂದು ಇನ್ ಸೈಡ್ ಅಜೆಂಡಾ ಕೂಡ ಇದೆ. ಇಲ್ಲ ಅಂಥ ನಾನು ಹೇಳಲ್ಲ" ಎಂದು ಸುದೀಪ್ ಹೇಳಿಕೆ ನೀಡಿದ್ದಾರೆ.