ಬಿಗ್ ಬಾಸ್ ಗೆ ಕಾನೂನು ತೊಡಕು : ಶೋ ನಿಲ್ಲಿಸಲು ಆದೇಶ : ಫಿನಾಲೆಗೂ ಮುನ್ನವೇ ಕಾರ್ಯಕ್ರಮಕ್ಕೆ ಬೀಳುತ್ತಾ ತೆರೆ ?
ಬಿಗ್ ಬಾಸ್ ಕಾರ್ಯಕ್ರಮ ಕುತೂಹಲಕಾರಿ ಘಟ್ಟ ತಲುಪಿರುವ ಹೊತ್ತಿನಲ್ಲಿಯೇ ಕಾರ್ಯಕ್ರಮದ ಪ್ರೇಮಿಗಳಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ಬಿಗ್‌ಬಾಸ್ ಕಾರ್ಯಕ್ರಮವನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ನಡೆಸಲಾಗುತ್ತಿದೆ ಎಂದು ದೂರು ನೀಡಲಾಗಿದೆ.
ಬಿಗ್‌ಬಾಸ್ ಶೋ ನಡೆಸಲು ರಾಮೋಹಳ್ಳಿ ಗ್ರಾಮ ಪಂಚಾಯಿತಿಯವರು ಅನುಮತಿ ನೀಡಿಲ್ಲ ಎಂಬುದಾಗಿ ತಿಳಿಸಿರುವ ಕಾರಣ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮಕ್ಕೆ ಬೆಂಗಳೂರು ನಗರ ಜಿಪಂ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ರಾಮೋಹಳ್ಳಿ ಪಿಡಿಒ, ಜಮೀನಿನ ಮಾಲೀಕ ಪಡೆದಿದ್ದ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ಅನ್ನು ರದ್ದು ಮಾಡಿದ್ದು ಬಿಗ್‌ಬಾಸ್ ಶೋ ನಿಲ್ಲಿಸುವಂತೆ ಆದೇಶಿಸಿದ್ದಾರೆ.
ಫಿನಾಲೆ ಸಮೀಪದಲ್ಲಿರುವಾಗಲೇ ಈ ರೀತಿ ಕಾನೂನು ತೊಡಕು ಉಂಟಾಗಿದೆ. ಇದೀಗ ಕಾರ್ಯಕ್ರಮ ಮುಂದುವರೆಯುವುದೇ ಅಥವಾ ಅರ್ಧಕ್ಕೆ ಮೊಟಕಾಗುವುದೇ ಕಾದುನೋಡಬೇಕಾಗಿದೆ.