Magh Purnima 2021: ನಾಳೆ ಭಾರತ ಹುಣ್ಣಿಮೆ, ಪವಿತ್ರ ನದಿಯಲ್ಲಿ ಸ್ನಾನ, ದಾನ ಮತ್ತು ಧ್ಯಾನದಿಂದ ಸಕಲ ಸಿದ್ಧಿ ಪ್ರಾಪ್ತಿ
1. ಈ ವರ್ಷದ ಭಾರತ ಹುಣ್ಣಿಮೆ ಯಾವಾಗ ? - ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಹುಣ್ಣಿಮೆ ತಿಥಿಯನ್ನು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಅಂತಿಮ ತಿಥಿಯೇ ಹುಣ್ಣಿಮೆಯಾಗಿರುತ್ತದೆ. ಈ ವರ್ಷದ ಮಾಘ ಪೌರ್ಣಿಮೆ ಅಥವಾ ಭಾರತ ಹುಣ್ಣಿಮೆ ಫೆಬ್ರವರಿ 27, 2021 ಶನಿವಾರಕ್ಕೆ ಬಂದಿದೆ. ಇಂದಿನ ದಿನ ಚಂದ್ರ ತನ್ನ ಸಂಪೂರ್ಣ ಕಲಾಗುಣಗಳಿಂದ ಉದಯಿಸುತ್ತಾನೆ ಎನ್ನಲಾಗಿದೆ.
2. ಭಾರತ ಹುಣ್ಣಿಮೆಯ ಶುಭ ಮುಹೂರ್ತ - ಭಾರತ ಹುಣ್ಣಿಮೆಯ ದಿನ ಶುಭ ಮುಹೂರ್ತದಲ್ಲಿ ಶ್ರೀವಿಷ್ಣುವಿನ ಪೂಜೆ ಹಾಗೂ ಧ್ಯಾನ ಮಾಡುವುದು ಉತ್ತಮ. ಈ ವರ್ಷದ ಶುಭ ಮೂಹುರ್ತಗಳು ಇಂತಿವೆ. ಹುಣ್ಣಿಮೆ ತಿಥಿ ಆರಂಭ - 26 ಫೆಬ್ರವರಿ 2021 (ಶುಕ್ರವಾರ) ಮಧ್ಯಾಹ್ನ 03.49ಕ್ಕೆ ಆರಂಭ. ಹುಣ್ಣಿಮೆ ತಿಥಿ ಸಮಾಪ್ತಿ - 27 ಫೆಬ್ರವರಿ 2021(ಶನಿವಾರ ) ಮಧ್ಯಾಹ್ನ 01.46ಕ್ಕೆ ಸಮಾಪ್ತಿ. ಹುಣ್ಣಿಮೆಯ ದಿನ ವೃತ ಕೈಗೊಂಡು ಚಂದ್ರನಿಗೆ ಅರ್ಘ್ಯ ನೀಡುವವರು ವೃತವನ್ನು 26 ಫೆಬ್ರವರಿ 2021ಕ್ಕೆ ಕೈಗೊಳ್ಳಬೇಕು ಹಾಗೂ ಶ್ರೀಮನ್ ಸತ್ಯ ನಾರಾಯಣ ಕಥೆಯನ್ನು ಫೆಬ್ರವರಿ 26ಕ್ಕೆ ನಡೆಸಬೇಕು. ಆದರೆ, ಹುಣ್ಣಿಮೆಯ ಪುಣ್ಯಕಾಲದ ಸ್ನಾನವನ್ನು ಅವರು ಫೆಬ್ರವರಿ 27ಕ್ಕೆ ಮಾಡಬೇಕು.
3. ಈ ದಿನ ಪವಿತ್ರ ನದಿಗಳ ಸ್ನಾನಕ್ಕೆ ಏಕೆ ಪ್ರಾಮುಖ್ಯತೆ ಇದೆ? - ಇಂದಿನ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ, ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇದೆ ಕಾರಣದಿಂದ ಮಾಘ ಮಾಸದ ಈ ಹುಣ್ಣಿಮೆಯಂದು ಕಾಶಿ, ಪ್ರಯಾಗರಾಜ್ ಹಾಗೂ ಹರಿದ್ವಾರ್ ಗಳಂತಹ ತೀರ್ಥಕ್ಷೇತ್ರಗಳಲ್ಲಿ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಮಾಘಮಾಸದ ಹುಣ್ಣಿಮೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವವರ ಮೇಲೆ ಮುಖ್ಯವಾಗಿ ಶ್ರೀವಿಷ್ಣು ಪ್ರಸನ್ನರಾಗುತ್ತಾರೆ ಎನ್ನಲಾಗುತ್ತದೆ ಮತ್ತು ಅವರಿಗೆ ಸುಖ, ಸೌಭಾಗ್ಯ ಮತ್ತು ಧನ-ಸಂತಾನದ ಜೊತೆಗೆ ಮೋಕ್ಷ ದಯಪಾಲಿಸುತ್ತಾನೆ ಎನ್ನಲಾಗಿದೆ.
4. ಕರ್ನಾಟಕದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳೇನು? - ಭಾರತ ಹುಣ್ಣಿಮೆಯ ಅಂಗವಾಗಿ ಸಪ್ತ ಗುಡ್ಡಗಳ ವಿಶಾಲ ಪ್ರದೇಶದಲ್ಲಿರುವ ಬೆಳಗಾವಿಯ ಜಿಲ್ಲೆಯ ಶ್ರೀಕ್ಷೇತ್ರ ಸೌದತ್ತಿಯ ಎಲ್ಲಮ್ಮ ದೇವಿ ಜಾತ್ರೆಗೆ ಪ್ರವಾಹೋಪಾದಿಯಲ್ಲಿ ಭಕ್ತರ ದಂಡೆ ಹರಿದುಬರುತ್ತದೆ. ಭಾರತ ಹುಣ್ಣಿಮೆಯ ದಿನ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಭಾವಿಕರು ಆಗಮಿಸುತ್ತಾರೆ. ಅಂದಿನ ದಿನ ದೇವಿಯ ದರ್ಶನಕ್ಕೆ ಬಂದ ಭಕ್ತರು ರಸ್ತೆ ಪಕ್ಕದಲ್ಲಿಯೇ ಓಲೆ ಹೂಡಿ ಕಡಬು ಹೋಳಿಗೆ ತಯಾರಿಸುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಭಂಡಾರ ಎರಚುತ್ತ ದೇವಿಯ ನಾಮಸ್ಮರಣೆ ಮಾಡುತ್ತಾರೆ. ಭಾರತ ಹುಣ್ಣಿಮೆಯ ದಿನ ಯಲ್ಲಮ್ಮ ದೇವಿಯ ಗುಡ್ಡದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಮಲಪ್ರಭಾ ನದಿಯ ಮಡಿಲಲ್ಲಿ ಇರುವ ಜೋಗುಳಬಾವಿಯಲ್ಲಿ ಪವಿತ್ರ ಸ್ನಾನಮಾಡಿ ದೇವಿಯ ದರ್ಶನ ಪಡೆಯುವುದು ಐತಿಹ್ಯ. ಇಲ್ಲಿ ಸ್ನಾನ ಮಾಡಿದ ಭಾವಿಕರು ಮೊದಲು ಜೋಗುಳಬಾವಿ ಸತ್ಯಮ್ಮನ ದರ್ಶನ ಪಡೆದು ಬಳಿಕ ಎಲ್ಲಮ್ಮ ದೇವಿಯ ದರ್ಶನಕ್ಕೆ ಸಾಗುತ್ತಾರೆ.
5. ಕುದೂರಿನ ಗ್ರಾಮದೇವತೆ, ಲಕ್ಷ್ಮಿದೇವಿ ಹಾಗೂ ರಾಮಲಿಂಗ ಚೌಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ - ಭರತ ಹುಣ್ಣಿಮೆಯ ದಿನದಂದು ಶಕ್ತಿದೆವತೆಗಳ ಆರಾಧನೆ ಮಾಡುವುದರಿಂದ ವಿಶೇಷ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇಂದಿನ ದಿನ ವಿಶೇಷವಾಗಿ ಕುದೂರಮ್ಮನ ದೇವಸ್ಥಾನವನ್ನು ವಿಶೇಷವಾಗಿ ಸಿಗರಿಸಲಾಗುತ್ತದೆ. ಬಳಿಕ ದೇವಿಗೆ ಅಭಿಷೇಕ ಕೈಗೊಂಡು ಫಲ ತರಕಾರಿಗಳಿಂದ ಸಿಂಗರಿಸಲಾಗುತ್ತದೆ. ಬಳಿಕ ಉಯ್ಯಾಲೆ ಸೇವೆ, ರಥೋತ್ಸವ, ಮಹಾ ಮಂಗಳಾರತಿ ನೆರವೇರಿಸಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ.
6. ಅಥಣಿಯಲ್ಲಿ ವೆಂಕಟೇಶ್ವರ ದೇವಸ್ಥಾನದಲ್ಲಿ ರಥೋತ್ಸವ - ಭಾರತ ಹುಣ್ಣಿಮೆಯ ಅಂಗವಾಗಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ವಿಶೇಷ ರೂಪದಲ್ಲಿ ಸಿಂಗರಿಸಲಾಗುತ್ತದೆ. ಅಂದು ಶ್ರೀವೆಂಕಟೇಶನಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಗುತ್ತದೆ. ಶ್ರೀ ವೆಂಕಟೇಶ್ವರನನ್ನು ಶ್ರೀವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ. ಭರತ ಹುಣ್ಣಿಮೆಯ ದಿನ ದೇವಸ್ಥಾನದಲ್ಲಿ ದೇವರಿಗೇ ಅಭಿಷೇಕ, ವಿಶೇಷ ಪೂಜೆ ಪಲ್ಲಕ್ಕಿ ಸೇವೆ ನೆರವೇರಿಸಿ ಬಳಿಕ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.