Mahindra XUV700: ಮಹೀಂದ್ರಾದ ಈ ಕಾರನ್ನು ಮುಗಿಬಿದ್ದು ಖರೀದಿಸುತ್ತಿರುವ ಗ್ರಾಹಕರು!
ಭಾರತದಲ್ಲಿ ಮಹೀಂದ್ರಾ XUV700 2 ಲಕ್ಷ ಯೂನಿಟ್ ಮಾರಾಟವಾದ ಹಿನ್ನಲೆ, ಕಂಪನಿಯು ಈ ಕಾರಿಗೆ 2 ಹೊಸ ಬಣ್ಣಗಳನ್ನು ಪರಿಚಯಿಸಿದೆ. ಇನ್ಮುಂದೆ XUV700 ಕಾರು 2 ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಸದ್ಯ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬ್ಲೂ, ಡ್ಯಾಜ್ಲಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ಎವರೆಸ್ಟ್ ವೈಟ್, ರೆಡ್ ರೇಜ್ ಮತ್ತು ನಾಪೋಲಿ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ. ಇದೀಗ ಡೀಪ್ ಫಾರೆಸ್ಟ್ ಮತ್ತು ಬರ್ನ್ಟ್ ಸಿಯೆನ್ನಾ ಎಂಬ 2 ಬಣ್ಣಗಳು ಹೊಸದಾಗಿ ಸೇರಿಕೊಂಡಿದೆ.
ನೂತನ ಮಹೀಂದ್ರಾ XUV700 ಎಸ್‍ಯುವಿ 13.99 ಲಕ್ಷದಿಂದ 26.99 ಲಕ್ಷ ರೂ. ಎಕ್ಸ್ ಶೋರೂಂ ಬೆಲೆ ಹೊಂದಿವೆ. MX, AX, AX3, AX5 ಸೇರಿದಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ತಮಗೆ ಇಷ್ಟವಿರುವ ವೇರಿಯಂಟ್ ಮತ್ತು ಬಣ್ಣಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.
ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 PS ಗರಿಷ್ಠ ಶಕ್ತಿ (ಪವರ್) ಹಾಗೂ 380 NM ಪೀಕ್ ಟಾರ್ಕ್ ಹೊರಹಾಕುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 PS ಪವರ್ ಮತ್ತು 450 NM ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಹೊಚ್ಚ ಹೊಸ XUV700 SUV ರೂಪಾಂತರಗಳಿಗೆ ತಕ್ಕಂತೆ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. AWD (ಆಲ್ ವೀಲ್ ಡ್ರೈವ್) ಹಾಗೂ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನ ಹೊಂದಿದ್ದು, 17KMPLವರೆಗೆ ಮೈಲೇಜ್ ನೀಡುತ್ತದೆ. 5, 6 ಮತ್ತು 7 ಆಸನ ವ್ಯವಸ್ಥೆಯಲ್ಲಿಯೂ ದೊರೆಯುತ್ತದೆ.
ಈ ಕಾರು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12-ಸ್ಪೀಕರ್ ಆಡಿಯೊ ಸಿಸ್ಟಮ್, 6-ವೇ ಪವರ್ ಡ್ರೈವರ್ ಸೀಟ್, ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಹಾಗೂ ಅಲೆಕ್ಸಾ ಕನೆಕ್ಟಿವಿಟಿ ಹೊಂದಿದೆ.