June 1 ರಿಂದ ನಿಮ್ಮ ಜೀವನಕ್ಕೆ ಸಂಬಂಧಿಸಿದ ಐದು ನಿಯಮಗಳು ಬದಲಾಗುತ್ತಿವೆ
ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲಗಳಿಗೆ ಬಾಹ್ಯ ಬೆಂಚ್‌ಮಾರ್ಕ್ ಸಾಲ ದರವನ್ನು (ಇಬಿಎಲ್‌ಆರ್) ಶೇಕಡಾ 7.05 ಕ್ಕೆ ಹೆಚ್ಚಿಸಿದೆ. ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಸಹ 0.40 ರಿಂದ 6.65 ರಷ್ಟು ಹೆಚ್ಚಾಗಿದೆ. SBI ಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೆಚ್ಚಾಗಿರುವ ಈ ಬಡ್ಡಿದರಗಳು ಜೂನ್ 1 ರಿಂದ ಅನ್ವಯಿಸಲಿವೆ.
ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಜೂನ್ 1 ರಿಂದ ಕಾರು ಮತ್ತು ಬೈಕ್‌ಗಳ ವಿಮೆ ಮತ್ತಷ್ಟು ದುಬಾರಿಯಾಗಲಿವೆ. ಏಕೆಂದರೆ, ಥರ್ಡ್ ಪಾರ್ಟಿ ಮೋಟಾರು ವಾಹನ ವಿಮೆಯ ಪ್ರೀಮಿಯಂ ಅನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಸರ್ಕಾರದ ಈ ನಿರ್ಧಾರದ ಬಳಿಕ, ನೀವು ಕಾರಿನ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಪ್ರೀಮಿಯಂ ಪಾವತಿಸಬೇಕಾಗಲಿದೆ. ಉದಾಹರಣೆಗೆ, 1000 ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ ವಿಮಾ ಪ್ರೀಮಿಯಂ 2,094 ರೂ. ಆಗಲಿದ್ದು, ಜೂನ್ 1 ರಿಂದ ದ್ವಿಚಕ್ರ ವಾಹನಗಳ ವಿಮಾ ಪ್ರೀಮಿಯಂ ಕೂಡ ಹೆಚ್ಚಾಗಲಿದೆ.
ಎರಡನೇ ಹಂತದ ಚಿನ್ನದ ಹಾಲ್‌ಮಾರ್ಕಿಂಗ್ ಜೂನ್ 1 ರಿಂದ ಜಾರಿಯಾಗಲಿದೆ. ಈ ಬದಲಾವಣೆಯೊಂದಿಗೆ ಹಳೆಯ 256 ಜಿಲ್ಲೆಗಳು ಮತ್ತು 32 ಜಿಲ್ಲೆಗಳಲ್ಲಿ ಹಾಲ್‌ಮಾರ್ಕಿಂಗ್ ಕೇಂದ್ರಗಳು ಆರಂಭಗೊಳ್ಳಲಿವೆ. ಇದರ ನಂತರ, ಹೊಸ ಮತ್ತು ಹಳೆಯ 288 ಜಿಲ್ಲೆಗಳಲ್ಲಿ ಹಾಲ್‌ಮಾರ್ಕಿಂಗ್ ಕಡ್ದಾಯವಾಗಿರಲಿದೆ ಮತ್ತು ಆಭರಣ ವ್ಯಾಪಾರಿಗಳು ಹಾಲ್‌ಮಾರ್ಕ್ ಮಾಡಿದ ಆಭರಣಗಳನ್ನು ಮಾತ್ರ ಮಾರಾಟ ಮಾಡಬೇಕಾಗಲಿದೆ. ಹಾಲ್‌ಮಾರ್ಕಿಂಗ್ ಮಾನದಂಡಗಳ ಪ್ರಕಾರ, ಜೂನ್ 1 ರಿಂದ ಈ ಜಿಲ್ಲೆಗಳಲ್ಲಿ 14, 18, 20, 22, 23 ಮತ್ತು 24 ಕ್ಯಾರೆಟ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಅಂದರೆ, ಇನ್ಮುಂದೆ ನೀವು ಈ ಜಿಲ್ಲೆಗಳಲ್ಲಿ ಹಾಲ್‌ಮಾರ್ಕ್ ಇಲ್ಲದೆ ಇರುವ ಚಿನ್ನವನ್ನು ಮಾರಾಟ ಮಾಡಲು ಸಾಧ್ಯವಿಲ್ಲ.
ಆಕ್ಸಿಸ್ ಬ್ಯಾಂಕ್ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸರಾಸರಿ ಮಾಸಿಕ ಬ್ಯಾಲೆನ್ಸ್ ಮಿತಿಯನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಿದೆ. ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಜೂನ್ 1, 2022 ರಿಂದ ಜಾರಿಗೆ ಬರುವಂತೆ ಉಳಿತಾಯ / ಸಂಬಳ ಖಾತೆಯ ಸುಂಕದ ರಚನೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆಟೋ ಡೆಬಿಟ್ ಯಶಸ್ವಿಯಾಗದೆ ಹೋದರೆ ವಿಧಿಸಲಾಗುವ ದಂಡದ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ನ ಗ್ರಾಹಕರು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ಸಾಧ್ಯವಾಗದಿದ್ದರೆ, ಹೆಚ್ಚಿನ ಸೇವಾ ಶುಲ್ಕವನ್ನು ಪಾವತಿಸಬೇಕಾಗಲಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ, ದೇಶದ ಹಲವು ರಾಜ್ಯಗಳಲ್ಲಿ ಲಭ್ಯವಿರುವ ಉಚಿತ ಗೋಧಿಯ ಕೋಟಾವನ್ನು ಕಡಿಮೆ ಮಾಡಲಾಗಿದೆ. ಯುಪಿ, ಬಿಹಾರ ಮತ್ತು ಕೇರಳದಲ್ಲಿ ಜೂನ್ 1 ರಿಂದ ಇದೀಗ 3 ಕೆಜಿ ಗೋಧಿ ಮತ್ತು 2 ಕೆಜಿ ಅಕ್ಕಿ ಬದಲಿಗೆ ಕೇವಲ 5 ಕೆಜಿ ಅಕ್ಕಿ ಮಾತ್ರ ಸಿಗಲಿದೆ. ಗೋಧಿ ಸಂಗ್ರಹಣೆ ಕಡಿಮೆಯಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಲ ರಾಜ್ಯಗಳು ಮೊದಲಿನಂತೆ ಗೋಧಿ ಪಡೆಯುವುದನ್ನು ಮುಂದುವರೆಸಲಿವೆ ಮತ್ತು ಇಲ್ಲಿ ಪಡಿತರ ವಿತರಣೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.