Makar Sankranti 2023: ಮಕರ ಸಂಕ್ರಾಂತಿ ಹಬ್ಬ, ಯಾವ ರಾಜ್ಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ?
ತಮಿಳುನಾಡಿನಲ್ಲಿ ಆಚರಿಸಲಾಗುವ ಪೊಂಗಲ್ ಭಗವಾನ್ ಇಂದ್ರನಿಗೆ ಗೌರವ ಸಲ್ಲಿಸುವ 4 ದಿನಗಳ ಆಚರಣೆಯಾಗಿದೆ. ಸಮೃದ್ಧ ಮಳೆ, ಫಲವತ್ತಾದ ಭೂಮಿ ಮತ್ತು ಉತ್ತಮ ಇಳುವರಿಗಾಗಿ ಇಂದ್ರನಿಗೆ ಧನ್ಯವಾದ ಹೇಳಲು ಈ ಹಬ್ಬ ಆಚರಿಸಲಾಗುತ್ತದೆ. ತಮಿಳುನಾಡು ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15ರಿಂದ 18ರವರೆಗೆ ಪೊಂಗಲ್ ಆಚರಿಸಲಾಗುತ್ತದೆ. ಪೊಂಗಲ್ ಅನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.
ಈ ವರ್ಷ ಜನವರಿ 14 ಮತ್ತು 15ರಂದು ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಸುಗ್ಗಿಯ ಋತುವಿನ ಆರಂಭ ಗುರುತಿಸಲು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಮನೆಳಲ್ಲಿಯೂ ಎಳ್ಳು-ಬೆಲ್ಲ ತಯಾರಿಸಿ ನೆರೆಹೊರೆಯರಿಗೆ ಹಂಚಲಾಗುತ್ತದೆ. ಜೊತೆಗೆ ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಪುರಾಣಗಳ ಪ್ರಕಾರ ಋಷಿ ವಿಶ್ವಾಮಿತ್ರನು ಈ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ ಅಂತಾ ಹೇಳಲಾಗುತ್ತದೆ. ಈ ದಿನ ಸೂರ್ಯ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
ಈ ವರ್ಷ ಜನವರಿ 13ರಂದು ಲೋಹ್ರಿ ಹಬ್ಬವು ಬರುತ್ತದೆ. ಮಕರ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಲೋಹ್ರಿಯನ್ನು ಆಚರಿಸಲಾಗುತ್ತದೆ. ಈ ಹಬ್ಬದೊಂದಿಗೆ ಅನೇಕ ಸಾಮಾಜಿಕ-ಸಾಂಸ್ಕೃತಿಕ ಮತ್ತು ಜಾನಪದ ದಂತಕಥೆಗಳಿವೆ. ಈ ಹಬ್ಬವು ಸಂಜೆಯ ದೀಪೋತ್ಸವಗಳಿಗೆ ಹೆಸರಾಗಿದೆ. ಹಬ್ಬದ ವೇಳೆ ಕಡಲೆಕಾಯಿ, ಎಳ್ಳು, ಬೆಲ್ಲ ಮತ್ತು ಪಾಪ್‌ಕಾರ್ನ್‌ಗಳನ್ನು ಸೇವಿಸಲಾಗುತ್ತದೆ. ಪೂಜಾ ವಿಧಿಯ ಭಾಗವಾಗಿ ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಪವಿತ್ರ ಅಗ್ನಿಗೆ ಅರ್ಪಿಸಲಾಗುತ್ತದೆ.
ಅಸ್ಸಾಂನಲ್ಲಿ ಬಿಹು ಸುಗ್ಗಿಯ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದ ಅತ್ಯಂತ ಸುಂದರ ರಾಜ್ಯಗಳಲ್ಲಿ ಒಂದಾಗಿರುವ ಅಸ್ಸಾಂನಲ್ಲಿ ಈ ಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ವಾಡಿಕೆ. ಒಂದೇ ವರ್ಷದಲ್ಲಿ ಅಸ್ಸಾಮಿಗಳು 3 ವಿಭಿನ್ನ ರೀತಿಯ ಬಿಹು ಹಬ್ಬವನ್ನು ಆಚರಿಸುತ್ತಾರೆ. ಏಪ್ರಿಲ್ ತಿಂಗಳ ಮಧ್ಯದಲ್ಲಿ ಬೋಹಾಗ್ ಬಿಹು, ಜನವರಿ ತಿಂಗಳ ಮಧ್ಯದಲ್ಲಿ ಮಾಗ್ ಬಿಹು ಮತ್ತು ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಕಾಟಿ ಬಿಹು ಎಂದು ಆಚರಿಸುತ್ತಾರೆ.