14ನೇ ವರ್ಷಕ್ಕೆ ಮದುವೆ, 16ನೇ ವಯಸ್ಸಿಗೆ ಸಿನಿ ಬದುಕಿಗೆ ಎಂಟ್ರಿ: ಹೇಗಿತ್ತು ಗೊತ್ತಾ ನಟಿ ರಾಧಿಕಾ ಕುಮಾರಸ್ವಾಮಿ ವೈಯಕ್ತಿಕ ಜೀವನ!
ಕನ್ನಡದ ಖ್ಯಾತ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಮೂಲತಃ ಮಂಗಳೂರಿನವರು. ಇವರ ಜನ್ಮ ನಾಮ ರಾಧಿಕಾ ಶೆಟ್ಟಿ. ನೋಡಲು ಚೆಂದುಳ್ಳಿ ಚೆಲುವೆಯಂತಿರುವ ರಾಧಿಕಾ ವೈಯಕ್ತಿಕ ಜೀವನದಲ್ಲಿ ಅಷ್ಟೇ ಕಷ್ಟಪಟ್ಟು ಬೆಳೆದುಬಂದವರು.
ತಮ್ಮ 14ನೇ ವಯಸ್ಸಿಗೆ ತುಳು ನಾಡಿನ ರತನ್ ಕುಮಾರ್ ಎಂಬುವವರೊಂದಿಗೆ ಮದುವೆಯಾಗಿದ್ದ ರಾಧಿಕಾ ಕೇವಲ ಒಂದೂವರೆ ವರ್ಷಕ್ಕೆ ಅಪಘಾತವೊಂದರಲ್ಲಿ ಪತಿಯನ್ನ ಕಳೆದುಕೊಳ್ಳುತ್ತಾರೆ. ಬಳಿಕ ಅತ್ತೆ ಮನೆಯಲ್ಲಿ ಸಾಕಷ್ಟು ನೋವು, ಹಿಂಸೆಯನ್ನು ಅನುಭವಿಸುತ್ತಾರೆ.
ಬಳಿಕ ತಮ್ಮ ಬದುಕನ್ನು ಬದಲಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ರಾಧಿಕಾ ತಮ್ಮ 16ನೇ ವಯಸ್ಸಿಗೆ ಬಣ್ಣದ ಬದುಕಿಗೆ ಪದಾರ್ಪಣೆ ಮಾಡುತ್ತಾರೆ.
'ನಿನಗಾಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ರಾಧಿಕಾ ಅವರು ಮೊದಲು ಅಭಿನಯಿಸಿದ್ದು 'ನೀಲಾ ಮೇಘ ಶಾಮ' ಸಿನಿಮಾದಲ್ಲಿ.
ನಿನಗಾಗಿ ಸಿನಿಮಾದಲ್ಲಿ ವಿಜಯರಾಘವೇಂದ್ರ ಅವರೊಂದಿಗೆ ಸೂಪರ್ ಜೋಡಿ ಎನಿಸಿಕೊಂಡ ರಾಧಿಕಾ, ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗಿನ ಅಣ್ಣ-ತಂಗಿ ಬಾಂಧವ್ಯವನ್ನು ಸಾರುವ ತವರಿಗೆ ಬಾ ತಂಗಿ ಸಿನಿಮಾ ಮೂಲಕ ಬಹು ದೊಡ್ಡ ಯಶಸ್ಸನ್ನು ಕಂಡರು.
ನಿನಗಾಗಿ, ತವರಿಗೆ ಬಾ ತಂಗಿ, ಮನೆ ಮಗಳು, ರಿಷಿ, ಹೀಗೆ ರಾಧಿಕಾ ಕನ್ನಡ ಸಿನಿಮಾ ರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿದರು.
ಈ ಸಂದರ್ಭದಲ್ಲಿ ರಾಧಿಕಾ ಅವರಿಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರ ಪರಿಚಯವಾಯಿತು.
ಕನ್ನಡ ಸಿನಿಮಾ ಜಗತ್ತಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ರಾಧಿಕಾ ಇದ್ದಕ್ಕಿದ್ದಂತೆ ಬಣ್ಣದ ಬದುಕಿನಿಂದ ಕಣ್ಮರೆಯಾಗುತ್ತಾರೆ.
ಈ ಮಧ್ಯೆ ರಾಧಿಕಾ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದಾಗ್ಯೂ, 2010ರವರೆಗೆ ಈ ವಿಷಯವನ್ನು ಕುಮಾರಸ್ವಾಮಿ ಹಾಗೂ ರಾಧಿಕಾ ಇಬ್ಬರೂ ಬಹಿರಂಗಪಡಿಸಿರುವುದಿಲ್ಲ. ಒಮ್ಮೆ ಮಾಧ್ಯಮದ ಮೂಲಕ ರಾಧಿಕಾ ಅವರೇ ತಿಳಿಸಿದ್ದು, ತಮ್ಮಿಬ್ಬರಿಗೂ ಶಮಿಕಾ ಎಂಬ ಮಗಳಿದ್ದಾಳೆ ಎಂತಲೂ ತಿಳಿಸಿದ್ದಾರೆ.
ಸುಮಾರು ಐದು ವರ್ಷಗಳ ಬಳಿಕ ಸಿನಿಮಾ ಬದುಕಿಗೆ ರೀ ಎಂಟ್ರಿ ನೀಡಿದ ರಾಧಿಕಾ ಕುಮಾರಸ್ವಾಮಿ ಶಮಿಕಾ ಎಂಟರ್‌ಪ್ರೈಸಸ್ ಎಂಬ ಹೆಸರಿನ ಪ್ರೊಡಕ್ಷನ್ ಸ್ಟುಡಿಯೊವನ್ನು ಕೂಡ ಸ್ಥಾಪಿಸಿದ್ದಾರೆ.