ಕರ್ನಾಟಕದ ಫೇಮಸ್ ʼಮಸಾಲೆ ದೋಸೆʼ ಹುಟ್ಟಿದ್ದು ಹೇಗೆ? ಮೊದಲ ಬಾರಿಗೆ ಇದನ್ನ ತಯಾರಿಸಿದ್ದು ಯಾರು ಗೊತ್ತಾ?
ಮಸಾಲೆ ದೋಸೆಯ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಸುರಿಯುತ್ತೆ... ಬಿಸಿಬಿಸಿ ದೋಸೆಯ ಜೊತೆಗೆ ಸಾಂಬಾರ್, ಚಟ್ನಿ ಇದ್ದರಂತೂ ರುಚಿ ದುಪ್ಪಟ್ಟಾಗುತ್ತದೆ. ದೋಸೆ ಅಂದ್ರೆ ಸಾಮಾನ್ಯವಾಗಿ ಎಲ್ಲಾ ಆಹಾರ ಪ್ರಿಯರ ಮೊದಲ ಆಯ್ಕೆ ಎಂದೇ ಹೇಳಬಹುದು.
ದೋಸೆಯನ್ನು ಹಲವು ವಿಧಗಳಲ್ಲಿ ತಯಾರಿಸಲಾಗುತ್ತದೆ. ವಿಭಿನ್ನ ಮಾರ್ಪಾಡುಗಳನ್ನು ಹೊಂದಿದ್ದರೂ, ಹೆಚ್ಚಿನವರಿಗೆ ಮಸಾಲಾ ದೋಸೆಯೇ ಫೇವರೇಟ್. ಆದರೆ ಎಂದಾದರೂ ಈ ಮಸಾಲಾ ದೋಸಾ ಎಲ್ಲಿ ಹುಟ್ಟಿಕೊಂಡಿತು? ಇದರ ಇತಿಹಾಸ ಏನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿದ್ದೀರಾ?
ಮಸಾಲಾ ದೋಸೆಯನ್ನು ಸಾಮಾನ್ಯವಾಗಿ ವಿವಿಧ ಪ್ರಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಮೈಸೂರು ಮಸಾಲಾ ದೋಸೆಯ ವಿಷಯಕ್ಕೆ ಬಂದರೆ ಅದಕ್ಕೆ ಕೆಂಪು ಚಟ್ನಿಯೊಂದಿಗೆ ಮಸಾಲೆ ಸೇರಿಸಲಾಗುತ್ತದೆ. ಬೆಣ್ಣೆ ಮಸಾಲಾ ದೋಸೆಯು ಕರ್ನಾಟಕದ ಗುರುತಾಗಿದ್ದು, ಬೆಣ್ಣೆಯ ಬಳಕೆಯಿಂದ ಅದರ ರುಚಿಯನ್ನು ಹೆಚ್ಚಿಸುತ್ತದೆ. ತಮಿಳುನಾಡಿನಲ್ಲಿರುವ ಮಸಾಲಾ ದೋಸೆಯು ಅದರ ದೊಡ್ಡ ಆಕಾರಕ್ಕೆ ಹೆಸರುವಾಸಿಯಾಗಿದೆ.
ಮಸಾಲೆದೋಸೆಯ ಇತಿಹಾಸಕ್ಕೆ ಬಂದರೆ 5ನೇ ಶತಮಾನದಿಂದಲೇ ದೋಸೆ ಚಾಲ್ತಿಯಲ್ಲಿದೆ. ಇತಿಹಾಸಕಾರರ ಪ್ರಕಾರ, ಪ್ರಾಚೀನ ಕಾಲದಲ್ಲಿ ಕರ್ನಾಟಕದ ಉಡುಪಿಯ ದೇವಸ್ಥಾನದ ಸುತ್ತಲಿನ ಬೀದಿಗಳು ದೋಸೆ ತಯಾರಿಕೆಯಲ್ಲೇ ಹೆಸರುವಾಸಿಯಾಗಿದ್ದವು. ತಮಿಳು ಸಾಹಿತ್ಯದಲ್ಲೂ ಇದರ ಉಲ್ಲೇಖವಿದೆ. ಮೈಸೂರು ಮಸಾಲೆ ದೋಸೆಯ ಬಗ್ಗೆ ಮಾತನಾಡುವುದಾದರೆ, ಅದರ ಇತಿಹಾಸವು ಮೈಸೂರಿನ ಮಹಾರಾಜ ಒಡೆಯರ್‌ಗೆ ಸಂಬಂಧಿಸಿದೆ. ಕರ್ನಾಟಕದ ಉಡುಪಿ ನಗರದಲ್ಲಿ ದೋಸೆಯು ಹುಟ್ಟಿಕೊಂಡಿದ್ದು, ಬ್ರಾಹ್ಮಣ ಅಡುಗೆಯವರು ಈ ಖಾದ್ಯವನ್ನು ತಯಾರಿಸಿದ್ದಾರೆ.
ಮಸಾಲೆ ದೋಸೆಯ ಕೆಲವು ಮೂಲ ಕಥೆಗಳಿವೆ. ಈ ಕಥೆ ಮೂಲಕ ಮಸಾಲೆ ದೋಸೆ ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದನ್ನು ತಿಳಿಯಬಹುದು. ದೋಸೆಯಲ್ಲಿ ಮಸಾಲೆ ತುಂಬುವ ಮೊದಲು, ಜನರು ಸಾಮಾನ್ಯವಾಗಿ ಆಲೂಗೆಡ್ಡೆ ಕರಿಯೊಂದಿಗೆ ಬಡಿಸುತ್ತಿದ್ದ ಸಾದಾ ದೋಸೆಯನ್ನು ಮಾತ್ರ ತಿನ್ನುತ್ತಿದ್ದರು. ಒಂದು ಕಥೆಯು ಹೇಳುವಂತೆ, ದಕ್ಷಿಣ ಭಾರತದ ಎಲ್ಲಾ ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರವಾಗಿ ದೋಸೆ ದೊರೆಯುತ್ತದೆ. ಇನ್ನು ಈ ದೋಸೆಯನ್ನು ಹೆಚ್ಚಾಗಿ ಹಿಂದೂ ಸಮಾಜದ ಬ್ರಾಹ್ಮಣರೇ ತಯಾರಿಸುತ್ತಾರೆ. ಆ ಕಾಲದ ಬ್ರಾಹ್ಮಣರು ತಮ್ಮ ವಿಶಿಷ್ಟ ಪದ್ಧತಿಗಳು ಮತ್ತು ನಂಬಿಕೆಗಳಿಂದಾಗಿ ಈರುಳ್ಳಿಯ ಬಳಕೆಯನ್ನು ವಿರೋಧಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಅಡುಗೆ ಮಾಡುವಾಗ ಆಲೂಗಡ್ಡೆ ಕೊರತೆಯಾದರೆ, ಈರುಳ್ಳಿಯನ್ನು ಕತ್ತರಿಸಿ ಅದನ್ನು ಆಲೂಗೆಡ್ಡೆ ಮೇಲೋಗರಕ್ಕೆ ಸೇರಿಸುತ್ತಿದ್ದರಂತೆ. ಹಾಗಾಗಿ ಈರುಳ್ಳಿ ಹೆಚ್ಚಾಗಿ ಕಾಣಿಸಬಾರು ಎಂದು ಆಲೂಗಡ್ಡೆಯ ಜತೆ ಸೇರಿಸಿ, ದೋಸೆಯೊಂದಿಗೆ ಹಾಕಿ ಕೊಡುತ್ತಿದ್ದರಂರೆ. ಈ ಮೂಲಕವೇ ಶುರುವಾಗಿದ್ದು ಇಂದಿನ ರುಚಿ ರುಚಿಯಾದ ಮಸಾಲೆ ದೋಸೆ.
ಸಾಮಾನ್ಯವಾಗಿ ದೋಸೆಯನ್ನು ಮಡಚಿದಾಗ, ದೋಸೆಯ ಹೊರಭಾಗವು ಗರಿಗರಿಯಾದ, ಗೋಲ್ಡನ್ ಆಗಿರಬೇಕು ಮತ್ತು ಒಳಭಾಗವು ಮೃದು ಮತ್ತು ಸ್ಪಂಜಿಯಾಗಿರಬೇಕು. ಸಾದಾ ದೋಸೆ ಎಂದರೆ ಸಾಂಬಾರ್ ಅಥವಾ ಚಟ್ನಿಯೊಂದಿಗೆ ತಿನ್ನಲಾಗುತ್ತದೆ. ಮಸಾಲಾ ದೋಸೆ ಎಂಬುದು ಆಲೂಗಡ್ಡೆ ಮಸಾಲಾದಿಂದ ತುಂಬಿದ ದೋಸೆಯಾಗಿದ್ದು, ಇದನ್ನು ಆಲೂಗಡ್ಡೆ, ಈರುಳ್ಳಿ, ಸಾಸಿವೆ ಮತ್ತು ಕರಿಬೇವಿನ ಎಲೆಗಳಿಂದ ತಯಾರಿಸಲಾಗುತ್ತದೆ.