ಆಸ್ಟ್ರೇಲಿಯಾ 2023ರ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು ಕರ್ನಾಟಕದ ಈ ಮಹಿಳೆ! ಮಂಗಳೂರಿನ ಆ ನಾರಿ ಯಾರು ಗೊತ್ತೇ?
ನಾವಿಂದು ಈ ವರದಿಯಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದ ಮಂಗಳೂರು ಮೂಲದ ಆ ಮಹಿಳೆ ಯಾರು? ಆಕೆಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೂ ಇರುವ ನಂಟು ಏನು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
34 ವರ್ಷದ ಊರ್ಮಿಳಾ ರೋಸಾರಿಯೋ ಕರ್ನಾಟಕದ ಮಂಗಳೂರಿನವರು. ಇವರು ಜನಿಸಿದ್ದು ಕತಾರ್’ನ ದೋಹಾದಲ್ಲಿ. ಆದರೆ ಇವರ ಪೋಷಕರಾದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೊ ಮಂಗಳೂರು ಬಳಿಯ ಕಿನ್ನಿಗೋಳಿ ಮೂಲದವರು. ಊರ್ಮಿಳಾ ಜನಿಸುವ ಸಂದರ್ಭದಲ್ಲಿ ಈ ದಂಪತಿ ಕತಾರ್’ನಲ್ಲಿ ಕೆಲಸ ಮಾಡುತ್ತಿದ್ದರು.
ಏಳು ವರ್ಷಗಳ ಹಿಂದೆ ಊರ್ಮಿಳಾ ಕುಟುಂಬವು ಭಾರತಕ್ಕೆ ಮರಳಿ, ಸಕಲೇಶಪುರದಲ್ಲಿ ನೆಲೆಸಿ ಕಾಫಿ ಎಸ್ಟೇಟ್ ಅನ್ನು ಪ್ರಾರಂಭಿಸಿತು. ಈ ಮಧ್ಯೆ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಿಂದ ಬಿಬಿಎ ಪದವೀಧರರಾದ ಊರ್ಮಿಳಾ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು.
ಬಾಲ್ಯದಿಂದಲೂ ಕ್ರೀಡಾ ಉತ್ಸಾಹಿಯಾಗಿದ್ದ ಊರ್ಮಿಳಾ ಆರಂಭದಲ್ಲಿ ಮೂರು ವರ್ಷಗಳ ಕಾಲ ಕತಾರ್ ಟೆನಿಸ್ ಫೆಡರೇಶನ್‌ನೊಂದಿಗೆ ಕೆಲಸ ಮಾಡಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಅಡಿಲೇಡ್ ಕ್ರಿಕೆಟ್ ತಂಡದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೊ ದಂಪತಿಗೆ ನಾಲ್ವರು ಮಕ್ಕಳು. ಅವರಲ್ಲಿ ಊರ್ಮಿಳಾ ಮಾತ್ರ ಶಿಕ್ಷಣದ ಬದಲಿಗೆ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹಿರಿಯ ಸಹೋದರ ಡಾ ಡೇವಿಡ್ ರೊಸಾರಿಯೊ ಅವರು ನ್ಯೂಕ್ಯಾಸಲ್ ವಿಶ್ವವಿದ್ಯಾಲಯದಲ್ಲಿ ಖಗೋಳ ಭೌತಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದಾರೆ. ಇತರ ಇಬ್ಬರು ಸಹೋದರರಲ್ಲಿ ಡಾ ರೋಸ್ ಈಶ್ವರಿ ಸ್ಕಾಟ್‌ಲ್ಯಾಂಡ್’ನಲ್ಲಿದ್ದರೆ, ಉದಯ್ ಎಂಬವರು ಕತಾರ್’ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ಉಪನ್ಯಾಸಕರಾಗಿದ್ದಾರೆ.
ಊರ್ಮಿಳಾ ಅವರ ತಾಯಿ ಐವಿ ರೊಸಾರಿಯೊ ಅವರು, ದೋಹಾ-ಕತಾರ್’ನ ಯುಜಿಪಿಸಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಅವರ ತಂದೆ ವ್ಯಾಲೆಂಟೈನ್ ರೊಸಾರಿಯೊ ದೋಹಾದಲ್ಲಿನ ಪ್ರತಿಷ್ಠಿತ ಹಣಕಾಸು ಕಂಪನಿಯಲ್ಲಿ ಹಣಕಾಸು ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು.
ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ BBA ಪದವೀಧರರಾದ ಊರ್ಮಿಳಾ ರೊಸಾರಿಯೊ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ರಾಷ್ಟ್ರೀಯ ಮಹಿಳಾ ತಂಡಕ್ಕೆ ಟೀಮ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿಶ್ವಕಪ್ ಹಿನ್ನೆಲೆಯಲ್ಲಿ ಅವರನ್ನು ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಟೀಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲು ಸೂಚಿಸಿದಾಗ, ಅದಕ್ಕೆ ಒಪ್ಪಿಗೆ ಸೂಚಿಸಿದ್ದರು.