ಪಾಕ್ ಮಾಜಿ ನಾಯಕನ ಬಾಲ್ ಟ್ಯಾಂಪರಿಂಗ್ ಹೇಳಿಕೆಗೆ ಟಕ್ಕರ್ ಕೊಟ್ಟ ವೇಗಿ ಮೊಹಮ್ಮದ್ ಶಮಿ...
ಕಳೆದ ತಿಂಗಳು 2024ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ವಿಚಿತ್ರ ಹೇಳಿಕೆಯನ್ನು ನೀಡಿದ್ದರು, ಇದರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಎಂಟು ಪಂದ್ಯದ ವೇಳೆ ಭಾರತವು ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಇದೀಗ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಪಾಕ್ ಮಾಜಿ ನಾಯಕನ ಹೇಳಿಕೆಗೆ ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.
ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತವು ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಇಂಜಮಾಮ್ ಟೀಕೆ ಮಾಡಿದ್ದರು, ಇದರ ಪರಿಣಾಮವಾಗಿ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಿದರು. ಅದೇ ಸಮಿತಿಯ ಭಾಗವಾಗಿದ್ದ ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್, ಇಂಜಮಾಮ್ ಹೇಳಿಕೆಯನ್ನು ಪುನರುಚ್ಚರಿಸಿದರು ಮತ್ತು 'ಅಂಪೈರ್‌ಗಳು ಯಾವಾಗಲೂ ಕೆಲವು ತಂಡಗಳಿಗೆ ಸಪೋರ್ಟ್ ಮಾಡುತ್ತಾರೆ ಇದರಿಂದ ಬೇರೆ ತಂಡಗಳಿಗೆ ಮೋಸ ಆಗುತ್ತಿದೆ ಎಂದಿದ್ದರು.
ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಶೋ ಒಂದರಲ್ಲಿ ಮಾತನಾಡಿದ ಶಮಿ, 2023 ರ ಏಕದಿನ ವಿಶ್ವಕಪ್‌ನಲ್ಲಿ ಮಾಜಿ ಪಾಕಿಸ್ತಾನ್ ಕ್ರಿಕೆಟಿಗ ಹಸನ್ ರಜಾ ಅವರ ವಿರುದ್ಧ ಮಾಡಿದ ಇದೇ ರೀತಿಯ ಆರೋಪಗಳನ್ನು ನೆನಪಿಸಿಕೊಳ್ಳುವಾಗ ಇಂಜಮಾಮ್ ಅವರ ವಿಚಿತ್ರ ಕಾಮೆಂಟ್‌ಗೆ ತಿರುಗೇಟು ನೀಡಿದ್ದಾರೆ.
ಅರ್ಷದೀಪ್ ವಿರುದ್ಧ ಪಾಕ್ ಮಾಜಿ ನಾಯಕ ಮಾಡಿದ ಕಾಮೆಂಟ್‌ಗೆ ಉತ್ತರಿಸಿರುವ ಶಮಿ "ನಾನು ಇಂಜಮಾಮ್-ಉಲ್-ಹಕ್‌ಗೆ ಹೇಳವುದೊಂದೆ, ನೀವು ಇದನ್ನು ಮಾಡಲು ಸಾಧ್ಯವಾದರೆ, ನೀವು ಜಾದೂಗಾರ, ಆದರೆ ಇತರರು ಅದನ್ನು ಮಾಡಿದಾಗ, ನೀವು ಅದನ್ನು ಬಾಲ್ ಟ್ಯಾಂಪರಿಂಗ್ ಎಂದು ಕರೆಯುತ್ತೀರಿ" ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
"ಎಕ್ಸ್‌ಪೀರಿಯೆಂನ್ಸ್ಡ್ ಆಟಗಾರರು ಇಂತಹ ಕಾಮೆಂಟ್‌ಗಳನ್ನು ಮಾಡಿದಾಗ ಅದು ಅನಿರೀಕ್ಷಿತ ಎನಿಸುತ್ತದೆ. ಈ ಕಾರ್ಟೂನ್ ಕಾಮೆಂಟ್‌ಗಳನ್ನು ಬೇರೆಡೆ ಮಾಡಿ. ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಯಾವುದೇ ಮ್ಯಾಜಿಕ್ ಅಗತ್ಯವಿಲ್ಲ, ನೀವು ಅದನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ" ಎಂದು ಫುಲ್ ಗರಂ ಆಗಿದ್ದಾರೆ.