ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಬ್ಯಾಡ್ಮಿಂಟನ್ ತಾರೆ ಪಿ. ಸಿಂಧು : ಈ ಸ್ಟಾರ್ ಆಟಗಾರ್ತಿಯನ್ನು ವರಿಸಲಿರುವ ವರ ಯಾರು ಗೊತ್ತೇ ?
ಬ್ಯಾಡ್ಮಿಂಟನ್ ಅಂಗಳದಲ್ಲಿ ವಿಶ್ವದ ಹಲವು ದಿಗ್ಗಜರನ್ನು ಸೋಲಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ವಧುವಾಗಿ ಕಂಗೊಳಿಸುವ ಕಾಲ ಹತ್ತಿರ ಬಂದಿದೆ. ಯಾರ ಮದುವೆ ಬಗ್ಗೆ ಅಧಿಕೃತ ಹೇಳಿಕೆ ಬಂದಿದೆ.
ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಡಿಸೆಂಬರ್ 22 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಿಂಧು ಜತೆ ಸಪ್ತಪದಿ ತುಳಿಯಲಿರುವ ವರ ಯಾರು ಎನ್ನುವುದು ಈಗ ಎಲ್ಲರ ಕುತೂಹಲ.
ಸಿಂಧು ಹೈದರಾಬಾದ್ ಮೂಲದ ವೆಂಕಟ್ ದತ್ತಾ ಸಾಯಿ ಅವರನ್ನು ವರಿಸಲಿದ್ದಾರೆ. ವೆಂಕಟ್ ದತ್ತಾ ಸಾಯಿ ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಎರಡೂ ಕುಟುಂಬಗಳು ಮೊದಲಿನಿಂದಲೇ ಪರಸ್ಪರರಿಗೆ ಪರಿಚಯ.
ಡಿಸೆಂಬರ್ 22 ರಂದು ಮದುವೆ ಸಮಾರಂಭವನ್ನು ಆಯೋಜಿಸಲು ಎರಡೂ ಕುಟುಂಬಗಳು ನಿರ್ಧರಿಸಿವೆ. ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ.
ಡಿಸೆಂಬರ್ 20ರಿಂದ ಸಿಂಧು ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಆರಂಭವಾಗಲಿವೆ. ಇವರ ಮದುವೆ ಉದಯಪುರದಲ್ಲಿ ನಡೆಯಲಿದೆ ಎನ್ನುವುದನ್ನು ಸಿಂಧು ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಿಂಧು ಯಾವಾಗಲೂ ತನ್ನ ವೃತ್ತಿಜೀವನಕ್ಕೆ ಮೊದಲ ಆದ್ಯತೆ ನೀಡುತ್ತಿದ್ದ ಆಟಗಾರ್ತಿ. ಇಲ್ಲಿಯವರೆಗೆ ಸಿಂಧು ಅವರ ಹೆಸರು ಯಾರೊಬ್ಬರ ಜೊತೆಗೂ ತಳುಕು ಹಾಕಿಕೊಂಡಿಲ್ಲ.
ಸಿಂಧು ಅವರು 2019 ರಲ್ಲಿ ಚಿನ್ನ ಸೇರಿದಂತೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐದು ಪದಕಗಳನ್ನು ಗೆದ್ದ ಭಾರತದ ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಒಬ್ಬರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.