ನನ್ನ ವೃತ್ತಿಜೀವನ ಹಾಳಾಗಲು ಎಂಎಸ್ ಧೋನಿಯೇ ಕಾರಣ! ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನಿಂದ ಶಾಕಿಂಗ್ ಹೇಳಿಕೆ
ಈಶ್ವರ್ ಚಂದ್ ಪಾಂಡೆ ಮಧ್ಯಪ್ರದೇಶ ಪರ ಆಡಿದ ಭಾರತೀಯ ಕ್ರಿಕೆಟಿಗ. ಬಲಗೈ ಮಧ್ಯಮ-ವೇಗದ ಬೌಲರ್ ಆಗಿದ್ದ ಅವರು 2012-13 ರ ರಣಜಿ ಟ್ರೋಫಿಯ ಪ್ರಮುಖ ವಿಕೆಟ್-ಟೇಕರ್ ಆಗಿದ್ದರು. ಭಾರತ A ತಂಡದ ಪರ ಆಡಿದ್ದ ಪಾಂಡೆ 2014 ರ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ಮತ್ತು ODI ತಂಡಗಳಲ್ಲಿ ಆಯ್ಕೆಯಾಗಿದ್ದರು.
ಇನ್ನು 12 ಸೆಪ್ಟೆಂಬರ್ 2022 ರಲ್ಲಿ ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಈಶ್ವರ್ ಪಾಂಡೆ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ. “ಮಹೇಂದ್ರ ಸಿಂಗ್ ಧೋನಿ ಅವಕಾಶ ನೀಡಿದ್ದರೆ ವೃತ್ತಿಜೀವನ ತುಂಬಾ ವಿಭಿನ್ನವಾಗಿರುತ್ತಿತ್ತು” ಎಂದು ಈಶ್ವರ್ ಪಾಂಡೆ ಹೇಳಿದ್ದಾರೆ.
“ಆಗ ನನಗೆ 23-24 ವರ್ಷ. ನನ್ನ ಫಿಟ್ನೆಸ್ ಅತ್ಯುತ್ತಮವಾಗಿತ್ತು. ಧೋನಿ ನನಗೆ ಭಾರತ ತಂಡದಲ್ಲಿ ಅವಕಾಶ ನೀಡಿದ್ದರೆ ಮತ್ತು ನಾನು ಭಾರತ ತಂಡಕ್ಕಾಗಿ ಪ್ರದರ್ಶನ ನೀಡಿದ್ದರೆ, ನನ್ನ ವೃತ್ತಿಜೀವನವು ವಿಭಿನ್ನವಾಗಿರುತ್ತಿತ್ತು” ಎಂದು ಹೇಳಿದರು.
ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ತಂಡಕ್ಕೆ ಈಶ್ವರ್ ಪಾಂಡೆ ಆಯ್ಕೆಯಾಗಿದ್ದರು. 2014 ಮತ್ತು 2015 ರಲ್ಲಿ ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು.
ಇನ್ನು ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ಈಶ್ವರ್ ಪಾಂಡೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು ಹೀಗೆ; “ಇಂದು ಆ ದಿನ ಬಂದಿದೆ. ಭಾರವಾದ ಹೃದಯದಿಂದ ನಾನು ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ” ಎಂದಿದ್ದರು.
“ನಾನು ಈ ಅದ್ಭುತ ಪ್ರಯಾಣವನ್ನು 2007 ರಲ್ಲಿ ಪ್ರಾರಂಭಿಸಿದೆ. ಅಂದಿನಿಂದ ನಾನು ಮೈದಾನದ ಒಳಗೆ ಮತ್ತು ಹೊರಗೆ ಪ್ರತಿ ಕ್ಷಣವನ್ನು ಆನಂದಿಸಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನನ್ನನ್ನು ಸೇರಿಸಿಕೊಳ್ಳಲಾಗಿತ್ತು. ಇದು ನನಗೆ ಹೆಮ್ಮೆಯ ವಿಷಯವಾಗಿದೆ. ಆದರೆ ದೇಶಕ್ಕಾಗಿ ಹೆಚ್ಚು ಆಡಲು ಅವಕಾಶ ಸಿಗಲಿಲ್ಲ ಎಂಬ ಬೇಸರವೂ ಇದೆ” ಎಂದು ಅಸಮಾಧಾನ ಹೊರಹಾಕಿದ್ದರು.