5,000 ಕೋಟಿಗೂ ಅಧಿಕ ಸಂಪತ್ತು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಸಿಇಒ ಇವರು..!
ಮುಂಬೈ ಮೂಲದ ನವಿಲ್ ನೊರೊನ್ಹಾ ದೇಶದ ಅತ್ಯಂತ ಶ್ರೀಮಂತ ಸಿಇಒ ಆಗಬೇಕಾದರೆ ತುಂಬಾ ಶ್ರಮವಹಿಸಿದ್ದಾರೆ. ಅವರು ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (Narsee Monjee Institute of Management Studies) ನಿಂದ ಮ್ಯಾನೇಜ್‌ಮೆಂಟ್ ಪದವಿ ಪಡೆದುಕೊಂಡಿದ್ದಾರೆ. ಇದಕ್ಕೂ ಮೊದಲು SIES ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದಿದ್ದರು. ಡಿಮಾರ್ಟ್‌ಗೆ ಎಂಟ್ರಿಯಾಗುವ ಮುನ್ನ ನವಿಲ್ ಖ್ಯಾತ ಎಫ್‌ಎಂಸಿಜಿ ಕಂಪನಿ ಹಿಂದುಸ್ತಾನ್ ಯೂನಿಲಿವರ್‌ನಲ್ಲಿ ಕೆಲಸ ಮಾಡಿದ್ದರು. ಮಾರಾಟ, ಮಾರುಕಟ್ಟೆ ಸಂಶೋಧನೆ ಮತ್ತು ಆಧುನಿಕ ವ್ಯಾಪಾರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅವರು ಅನುಭವ ಗಳಿಸಿದರು. ನವಿಲ್ ತಮ್ಮ 20ನೇ ವಯಸ್ಸಿನಲ್ಲಿ ದಮಾನಿಯವರ ಜೊತೆ ಕೈಜೋಡಿಸಿದಾಗ ಅವರ ಜೀವನಕ್ಕೆ ಮಹತ್ವದ ತಿರುವು ಸಿಕ್ಕಿತು.
HULನಲ್ಲಿ ನವಿಲ್ 8 ವರ್ಷಗಳ ಕಾಲ ಕೆಲಸ ಮಾಡಿದರು. ಈ ವೇಳೆ ಅವರು DMart ಪ್ರವರ್ತಕರೊಂದಿಗೆ ಸಂಪರ್ಕಕ್ಕೆ ಬಂದರು. ನವಿಲ್ ಆರಂಭದಿಂದಲೇ ದಮಾನಿಯವರನ್ನು ಪ್ರಭಾವಿಸಿದ್ದರು. ಡಿಮಾರ್ಟ್ ಸಂಸ್ಥಾಪಕರು ತಮ್ಮ ಕಂಪನಿಯ ಹೊಸ ವ್ಯವಹಾರದ ಮುಖ್ಯಸ್ಥರನ್ನಾಗಿ 2004ರಲ್ಲಿ ನವಿಲ್ ರನ್ನು ನೇಮಿಸಿದರು. ನವಿಲ್ ಅವರ ಪ್ರಖರ ಜ್ಞಾನ ಮತ್ತು ಉದ್ಯಮದ ಪ್ರಸಿದ್ಧ ಸ್ಟ್ರಾಟಜಿಗಳ ನೇತೃತ್ವದಲ್ಲಿ ಡಿಮಾರ್ಟ್ ಕಳೆದ 5 ವರ್ಷಗಳಿಂದ ಭರ್ಜರಿ ಲಾಭವನ್ನು ಗಳಿಸುತ್ತಿದೆ. ಆದರೆ ಟಾಟಾ ಟೆಸ್ಕೋ ಮಾಲೀಕತ್ವದ ಸ್ಟಾರ್, ಆದಿತ್ಯ ಬಿರ್ಲಾ ರಿಟೇಲ್ ಮತ್ತು ಸ್ಪೆನ್ಸರ್ ನಂತಹ ಕಂಪನಿಗಳು ಡಿಮಾರ್ಟ್ ನಷ್ಟು ಲಾಭ ಗಳಿಸಲು ಮತ್ತು ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ.
ನವಿಲ್ ಅವರನ್ನು ಭಾರತೀಯ ಉದ್ಯಮದ GOAT ಎಂದು ಪರಿಗಣಿಸಲಾಗಿದೆ. ಇದರರ್ಥ ‘ಸಾರ್ವಕಾಲಿಕ ಶ್ರೇಷ್ಠ’ ಎಂದು. 48 ಗಂಟೆಗಳ ಪೂರೈಕೆದಾರರ ಪಾವತಿ ನೀತಿಯನ್ನು ಒಳಗೊಂಡಂತೆ ಅವರ ಅತ್ಯಂತ ಯಶಸ್ವಿ ತಂತ್ರಗಾರಿಕೆಯಿಂದಾಗಿ ಡಿಮಾರ್ಟ್ ದೊಡ್ಡ ಯಶಸ್ಸು ಕಾಣಲು ಸಾಧ್ಯವಾಯಿತು. ಈ ನೀತಿಯಿಂದ ಡಿಮಾರ್ಟ್ ಕಡಿಮೆ ಬೆಲೆಯ ವಸ್ತುಗಳ ಕೇಂದ್ರಬಿಂದುವಾಯಿತು. ಭಾರತೀಯ ಮಾರುಕಟ್ಟೆಯಲ್ಲಿ ಡಿಮಾರ್ಟ್ ಗಟ್ಟಿಯಾಗಿ ನಿಲ್ಲುವುದರ ಹಿಂದೆ ನವಿಲ್ ಅವರ ಅಪಾರ ಪರಿಶ್ರಮವಿದೆ.
ನವಿಲ್ ನೊರೊನ್ಹಾ ಅವರು ವ್ಯಾಪಾರ ವಲಯದಲ್ಲಿ ವಿನಮ್ರ ಸಿಇಒ ಆಗಿ ಮೆಚ್ಚುಗೆ ಗಳಿಸಿದ್ದಾರೆ. ಪರಿಶ್ರಮಕ್ಕೆ ಮತ್ತೊಂದು ಹೆಸರೇ ನವಿಲ್ ನೊರೊನ್ಹಾ ಎನ್ನಬಹುದು. ಹಾಗೆ ಅವರು ಡಿಮಾರ್ಟ್ ಯಶಸ್ಸಿನ ಹಿಂದೆ ಕೆಲಸ ಮಾಡಿದ್ದಾರೆ. ಕಂಪನಿಯ ಐಪಿಒ ನಂತರ ಒಂದು ದಿನ ಮಾತ್ರ ಅವರು ಕಚೇರಿ ಕೆಲಸವನ್ನು ತಪ್ಪಿಸಿಕೊಂಡಿದ್ದರು. ಅದೂ ಅವರ ಮಗಳ ಹುಟ್ಟುಹಬ್ಬವನ್ನು ಆಚರಿಸಲು. ನವಿಲ್ ಅದ್ದೂರಿ ಕಚೇರಿ ಹೊಂದಿರುವ ಅತಿರಂಜಿತ ಸಿಇಒ ಅಲ್ಲ. ಅವರು ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದ ತುಂಬಾ ಸರಳ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದಾರೆ.