ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ: ಬದಲಾಗಲಿವೆ ಹಲವು ನಿಯಮ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ
01 ಏಪ್ರಿಲ್ 2024ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು, ವಿತ್ತೀಯ ವರ್ಷ ಆರಂಭದ ಮೊದಲ ದಿನವೇ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ದೊರೆತಿದೆ. ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಇಂದಿನಿಂದ ಇನ್ನೂ ಕೆಲವು ಪ್ರಮುಖ ನಿಮಯಗಳು ಬದಲಾಗಲಿದ್ದು ನಿಮ್ಮ ಜೇಬಿನ ಮೇಲೆ ಇದರ ನೇರ ಪ್ರಭಾವ ಕಂಡು ಬರಲಿದೆ. ಇಂದಿನಿಂದ ಏನೆಲ್ಲಾ ನಿಯಮಗಳು ಕಂಡು ಬರಲಿವೆ ಎಂದು ತಿಳಿಯೋಣ...
ತೈಲ ಮಾರುಕಟ್ಟೆ ಕಂಪನಿಗಳು ತಿಂಗಳ ಮೊದಲ ದಿನವೇ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 30.50 ರೂ. ಕಡಿತ ಘೋಷಿಸಿವೆ. ಆದಾಗ್ಯೂ, ವಾಣಿಜ್ಯ ಸಿಲಿಂಡರ್‌ಗಳ ಮೇಲಷ್ಟೇ ಬೆಲೆ ಕಡಿತವನ್ನು ಘೋಷಿಸಲಾಗಿದೆ. ಗೃಹಬಳಕೆ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬೆಲೆ ಕಡಿತದೊಂದಿಗೆ ಇಂದಿನಿಂದ ವಾಣಿಜ್ಯ ಸಿಲಿಂಡರ್ ದರ ಪ್ರಮುಖ ನಗರಗಳಾದ ದೆಹಲಿಯಲ್ಲಿ 1764.50 ರೂ., ಕೋಲ್ಕತ್ತಾದಲ್ಲಿ 1879 ರೂ. , ಮುಂಬೈನಲ್ಲಿ 1717.50 ರೂ. ಮತ್ತು ಚೆನ್ನೈನಲ್ಲಿ 1930.00ರೂ. ಗಳಿಗೆ ಲಭ್ಯವಾಗಲಿದೆ.
ಹೊಸ ಆರ್ಥಿಕ ವರ್ಷದಿಂದ ಎಂದರೆ ಇಂದಿನಿಂದ ವಿಮಾ ಯೋಜನೆಗೆ ಸಂಬಂಧಿಸಿದ ಕೆಲವು ನಿಯಮಗಳು ಕೂಡ ಬದಲಾಗಲಿವೆ. ನಿಯಮಗಳ ಪ್ರಕಾರ, 01 ಏಪ್ರಿಲ್ 2024ರಿಂದ ವಿಮಾ ನಿಯಂತ್ರಕ IRDAI ವಿಮಾ ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ವಿತರಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಏಪ್ರಿಲ್ 01ರಿಂದ ಪಾಲಿಸಿದಾರರ ಪಾಲಿಸಿ ಸರೆಂಡರ್ ಮೇಲಿನ ಸರೆಂಡರ್ ಮೌಲ್ಯವು ಪಾಲಿಸಿಯನ್ನು ಸರೆಂಡರ್ ಮಾಡಿದ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ಹೊಸ ಹಣಕಾಸು ವರ್ಷ, 01 ಏಪ್ರಿಲ್ 2024ರಿಂದ ಕಾರ್ ಕರೀದಿ ದುಬಾರಿಯಾಗಲಿದೆ. ಅದರಲ್ಲೂ, ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ (FAME-II) ಅಡಿಯಲ್ಲಿ ಲಭ್ಯವಿರುವ ಸಬ್ಸಿಡಿಯನ್ನು ಸರ್ಕಾರ ನಿಲ್ಲಿಸಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಖರೀದಿ ಇಂದಿನಿಂದ ದುಬಾರಿಯಾಗಲಿದೆ.
01 ಏಪ್ರಿಲ್ 2024ರಿಂದ ಸರ್ಕಾರ ಹೊಸ ತೆರಿಗೆ ವ್ಯವಷ್ಟೆಯನ್ನು ಡೀಫಾಲ್ಟ್ ಸೆಟ್ಟಿಂಗ್ ಆಗಿ ಜಾರಿಗೊಳಿಸಲಿದೆ. ಅರ್ಥಾತ್, ತೆರಿಗೆದಾರರು ಹಳೆಯ ತೆರಿಗೆ ರಚನೆಗೆ ಬದ್ಧರಾಗಿರದಿದ್ದರೆ ಸ್ವಯಂಚಾಲಿತವಾಗಿ ಹೊಸ ವ್ಯವಸ್ಥೆಗೆ ಅನುಗುಣವಾಗಿ ತೆರಿಗೆ ಮೌಲ್ಯಮಾಪನ ಮಾಡಲಾಗುತ್ತದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ಹೆಚ್ಚಿನ ಭದ್ರತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಏಪ್ರಿಲ್ 1, 2024 ರಿಂದ PFRDA ವರ್ಧಿತ ವ್ಯವಸ್ಥೆಯು ಪಾಸ್‌ವರ್ಡ್ ಆಧಾರಿತ CRA ಸಿಸ್ಟಮ್ ಪ್ರವೇಶಕ್ಕಾಗಿ ಎರಡು ಅಂಶಗಳ ಆಧಾರ್ ಆಧಾರಿತ ದೃಢೀಕರಣವನ್ನು ಜಾರಿಗೆ ತರಲಿದೆ. ಆಧಾರ್ ಆಧಾರಿತ ಲಾಗಿನ್ ದೃಢೀಕರಣವನ್ನು ಪ್ರಸ್ತುತ ಬಳಕೆದಾರ ID ಮತ್ತು ಪಾಸ್‌ವರ್ಡ್ ಆಧಾರಿತ ಲಾಗಿನ್ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಾಗುತ್ತದೆ.
01 ಏಪ್ರಿಲ್ 2024ರಿಂದ ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ನಿಯಮದಲ್ಲೂ ಬದಲಾವಣೆ ಆಗಲಿದೆ. ಇಂದಿನಿಂದ ನೀವು ಬ್ಯಾಂಕ್‌ನೊಂದಿಗೆ ನಿಮ್ಮ ಕಾರಿನ ಫಾಸ್ಟ್‌ಟ್ಯಾಗ್‌ನ ಕೆವೈಸಿ ನವೀಕರಿಸುವುದು ಕಡ್ಡಾಯವಾಗಿದೆ.
ಇಂದಿನಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ದೊಡ್ಡ ಬದಲಾವಣೆ ಕಂಡು ಬರಲಿದೆ. ಹೊಸ ಆರ್ಥಿಕ ವರ್ಷದಲ್ಲಿ, ಉದ್ಯೋಗಿಯು ಕೆಲ ಬದಲಾಯಿಸಿದರೆ ಅವರ ಪಿಎಫ್ ಖಾತೆ ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲ್ಪಡುತ್ತದೆ. ಆದಾಗ್ಯೂ, ಚಂದಾದಾರರ ಕೋರಿಕೆಯ ಮೇರೆಗೆ ಮಾತ್ರವೇ ಈ ವರ್ಗಾವಣೆ ಸಾಧ್ಯವಾಗಲಿದೆ.