ಸೇಲ್ಸ್ ಗರ್ಲ್ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿದ್ದು ಹೇಗೆ ? ಕಾಂಗ್ರೆಸ್ ಕಟ್ಟಾಳುಗಳಾದ ಪತಿ, ಅತ್ತೆ, ಮಾವನ ಮಧ್ಯೆ ಬರೆದಿದ್ದಾರೆ ಹಲವು ದಾಖಲೆ
ನಿರ್ಮಲಾ ಸೀತಾರಾಮನ್ ಮಧುರೈನ ಬ್ರಾಹ್ಮಣ ಕುಟುಂಬದಲ್ಲಿ 18 ಆಗಸ್ಟ್ 1959 ರಂದು ಜನಿಸಿದರು.ತಂದೆ ರೈಲ್ವೇಯಲ್ಲಿದ್ದರೆ ತಾಯಿ ಗೃಹಿಣಿ.
ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ ಅವರು ದೆಹಲಿಯ ಜೆಎನ್‌ಯುನಲ್ಲಿ ಸ್ನಾತಕೋತ್ತರ ಮತ್ತು ಎಂಫಿಲ್ ಮಾಡಿದರು.ಇಲ್ಲಿಯೇ ಪರಕಾಲ ಪ್ರಭಾಕರ್ ಅವರನ್ನು ಭೇಟಿಯಾಗಿ, ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು.
ಆದರೆ ಇವರ ಕುಟುಂಬಕ್ಕೆ ಈ ಸಂಬಂಧ ಸುತಾರಾಂ ಇಷ್ಟವಿರಲಿಲ್ಲ. ನಂತರ ಮಕ್ಕಳ ಸುಖವನ್ನು ಗಮನದಲ್ಲಿಟ್ಟುಕೊಂಡು ಇಬ್ಬರ ಕುಟುಂಬ ಈ ಮದುವೆಗೆ ಒಪ್ಪಿಗೆ ನೀಡಿತು. ಪರಿಣಾಮವಾಗಿ 1986ರಲ್ಲಿ ಇಬ್ಬರೂ ಮದುವೆಯಾದರು.
ಮದುವೆಯ ನಂತರ ನಿರ್ಮಲಾ ಸೀತಾರಾಮನ್ ಪತಿಯೊಂದಿಗೆ ಲಂಡನ್‌ಗೆ ತೆರಳಿದ್ದರು.ಅಲ್ಲಿ ಆಕೆಗೆ ರೀಜೆಂಟ್ ಸ್ಟ್ರೀಟ್‌ನಲ್ಲಿರುವ ಹೋಮ್ ಡೆಕೋರ್ ಸ್ಟೋರ್‌ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಸಿಕ್ಕಿತು.ನಂತರ ಕೆಲವು ದಿನಗಳ ಕಾಲ BCC ವರ್ಲ್ಡ್ ಸರ್ವೀಸ್‌ನೊಂದಿಗೆ ಕೆಲಸ ಮಾಡಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿಯ ತೀಕ್ಷ್ಣ ಮತ್ತು ಕ್ರಿಯಾಶೀಲ ನಾಯಕರಲ್ಲಿ ಒಬ್ಬರು.ಆದರೆ ಅವರು ಮದುವೆಯಾಗಿ ಹೋದದ್ದು ಕಾಂಗ್ರೆಸ್ ಹಿನ್ನೆಲೆಯುಳ್ಳ ಪರಿವಾರಕ್ಕೆ.ಅತ್ತೆ ಮತ್ತು ಮಾವ ಇಬ್ಬರೂ ಕಾಂಗ್ರೆಸ್‌ನಲ್ಲಿದ್ದಾರೆ. ನಿರ್ಮಲಾ ಅತ್ತೆ ಆಂಧ್ರಪ್ರದೇಶದ ಕಾಂಗ್ರೆಸ್ ಶಾಸಕರಾಗಿದ್ದರೆ,ಮಾವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದವರು.
ನಿರ್ಮಲಾ ಸೀತಾರಾಮನ್ 1990 ರಲ್ಲಿ ದೇಶಕ್ಕೆ ಮರಳಿದ ನಂತರ 2008ರಲ್ಲಿ ಬಿಜೆಪಿ ಸೇರಿದರು.ಎರಡು ವರ್ಷಗಳಲ್ಲಿ,ಅವರು ಸುಷ್ಮಾ ಸ್ವರಾಜ್ ನಂತರ ಪಕ್ಷದ ಎರಡನೇ ಮಹಿಳಾ ವಕ್ತಾರರಾದರು.ಟಿವಿ ಚರ್ಚಾ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಮುಖವಾಗಿ ಹೊರ ಹೊಮ್ಮಿದರು.
2014ರಲ್ಲಿ ಮೋದಿ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದರು. ಮೊದಲು ಹಣಕಾಸು ಖಾತೆ ರಾಜ್ಯ ಸಚಿವರಾದರು.2017 ರಲ್ಲಿ, ಅವರು ದೇಶದ ರಕ್ಷಣಾ ಸಚಿವರಾಗುವ ಗೌರವ ಪಡೆದರು. 2019ರಲ್ಲಿ ಅವರಿಗೆ ಹಣಕಾಸು ಸಚಿವರ ಜವಾಬ್ದಾರಿಯನ್ನು ನೀಡಲಾಯಿತು.
ಮೋದಿ 3.0 ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಿರ್ಮಲಾ ಸೀತಾರಾಮನ್ ಹಲವು ದಾಖಲೆಗಳನ್ನು ಮಾಡಿದ್ದಾರೆ. ಮೋದಿ ಸರ್ಕಾರದ ಸತತ ಮೂರನೇ ಅವಧಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ಹಣಕಾಸು ಸಚಿವರಾಗಿ ಪೂರ್ಣಾವಧಿ ಪೂರ್ಣಗೊಳಿಸುವ ಮೂಲಕ ಮಾಜಿ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಮತ್ತು ಮನಮೋಹನ್ ಸಿಂಗ್ ಅವರನ್ನು ಸರಿಗಟ್ಟಿದ್ದಾರೆ.
1. 2017ರಲ್ಲಿ ಮೊದಲ ಮಹಿಳಾ ರಕ್ಷಣಾ ಸಚಿವೆಯಾಗಿ ನೇಮಕಗೊಂಡು ಹೊಸ ದಾಖಲೆ ನಿರ್ಮಿಸಿದ್ದರು. 2. ಸ್ವತಂತ್ರ ಭಾರತದಲ್ಲಿ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ಎಂಬ ದಾಖಲೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿದೆ. 3. ಸತತ ಆರನೇ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿ 4. ಜುಲೈನಲ್ಲಿ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ, ಇನ್ನೂ ಒಂದು ಹೆಜ್ಜೆ ಮುಂದು.