Reel ಅಷ್ಟೇ ಅಲ್ಲ Real ಲೈಫ್‌ನಲ್ಲೂ `ಲವ್ಲಿ ಸ್ಟಾರ್`: ನಟ ಪ್ರೇಮ್ ಕೈತುಂಬಾ ದುಡ್ಡು ಕಂಡಿದ್ದೇ ಈ ಸಿನಿಮಾದಲ್ಲಂತೆ!
ಸ್ಯಾಂಡಲ್ವುಡ್ನಲ್ಲಿ ನೆನಪಿರಲಿ ಪ್ರೇಮ್ ಎಂತಲೇ ಚಿರಪರಿಚಿತರಾಗಿರುವ ಲವ್ಲಿ ಸ್ಟಾರ್ ಪ್ರೇಮ್ 18 ಏಪ್ರಿಲ್ 1976ರಲ್ಲಿ ಜನಸಿದರು. ಮೊದಲಿಗೆ ಕಿರುತೆರೆಯಲ್ಲಿ ಟಿ.ಎನ್.ಸೀತಾರಾಮ್ ಅವರ "ಮನ್ವಂತರ" ಸೀರಿಯಲ್‌ನಲ್ಲಿ ಕಲಾವಿದರಾಗಿ ಬಣ್ಣ ಹಚ್ಚಿದ ಪ್ರೇಮ್ ನಂತರ "ಆರ್ಧ ಸತ್ಯ" ಎಂಬ ಧಾರಾವಾಹಿಯಲ್ಲೂ ಅವಕಾಶ ಪಡೆದರು.
2004ರಲ್ಲಿ 'ಪ್ರಾಣ' ಸಿನಿಮಾದಲ್ಲಿ ನಾಯಕ ನಟರಾಗಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟ ಪ್ರೇಮ್ ಆವರಿಗೆ ದೊಡ್ಡ ಪ್ರಮಾಣದಲ್ಲಿ ಬ್ರೇಕ್ ಕೊಟ್ಟಿದ್ದು 2005ರಲ್ಲಿ ತೆರೆಕಂಡ "ನೆನಪಿರಲಿ" ಚಿತ್ರ ನಟ ಪ್ರೇಮ್ ಗೆ ಸಿನಿ ಕರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿತು. ಅಂದಿನಿಂದ ಅವರು ನೆನಪಿರಲಿ ಪ್ರೇಮ್ ಎಂತಲೇ ಖ್ಯಾತಿ ಪಡೆದಿದ್ದಾರೆ.
2006ರಲ್ಲಿ ನಟ ಪ್ರೇಮ್, ಮೋಹಕ ತಾರೆ ರಮ್ಯಾ ಅವರೊಂದಿಗೆ ನಟಿಸಿದ "ಜೊತೆ ಜೊತೆಯಲಿ" ಸಿನಿಮಾ ಬರೋಬ್ಬರಿ 25 ವಾರಗಳಿಗೂ ಹೆಚ್ಚು ಪ್ರದರ್ಶನಕಂಡು ದಾಖಲೆಯನ್ನೇ ನಿರ್ಮಿಸಿತು. ಅಷ್ಟೇ ಅಲ್ಲ, ಇವರ ಜೀವನದಲ್ಲಿ ಹಣಕಾಸಿನ ಸ್ಥಿತಿಯನ್ನು ಸುಧಾರಿಸಿದ ಸಿನಿಮಾ ಕೂಡ ಹೌದು.
2006ರಲ್ಲಿ ತೆರೆಕಂಡ ದಿನಕರ್ ತೂಗದೀಪ್ ನಿರ್ದೇಶನದ "ಜೊತೆ ಜೊತೆಯಲಿ" ಸಿನಿಮಾದಲ್ಲೇ ನಾನು (ಪ್ರೇಮ್) ಹೆಚ್ಚು ಹಣ ನೋಡಿದ್ದು ಎಂದು ಸ್ವತಃ ನಟ ಪ್ರೇಮ್ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಸಿನಿಮಾದಿಂದಲೇ ತಮ್ಮ ಕಷ್ಟದ ಸಮಯಗಳು ಕಳೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಎಂದು ಪ್ರೇಮ್ ಇಂದಿಗೂ ನೆನೆಯುತ್ತಾರೆ.
ಕನ್ನಡ ಸಿನಿಮಾಗಳಲ್ಲಿ ಪಲ್ಲಕ್ಕಿ, ಜೊತೆಗಾರ, ಚಾರ್ ಮಿನಾರ್ ಹೀಗೆ ಹಲವು ಪ್ರೇಮಕಥೆ ಆಧಾರಿತ ಸಿನಿಮಾಗಳಲ್ಲಿ ನಟಿಸಿರುವ ಪ್ರೇಮ್ 'ಲವ್ಲಿ ಸ್ಟಾರ್' ಎಂತಲೇ ಖ್ಯಾತಿ ಪಡೆದಿದ್ದಾರೆ.
ಒಂದೆಡೆ ಮನೆ ಹಿರಿಯ ಮಗನಾಗಿ ಕುಟುಂಬದ ಜವಾಬ್ದಾರಿ, ಮತ್ತೊಂದೆಡೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಒಂದು ಹೆಸರು ಮಾಡಬೇಕೆಂಬ ಆಸೆ. ಈ ಕನಸಿನೊಂದಿಗೆ ಇದ್ದ ಕೆಲಸವನ್ನೂ ಬಿಟ್ಟು ಸಿನಿಮಾ ಹಿಂದೆ ಬಿದ್ದಿದ ನಟ ಪ್ರೇಮ್ ಅವರಿಗೆ ಕಷ್ಟದ ದಿನಗಳಲ್ಲಿ ಬೆನ್ನೆಲುಬಾಗಿ ನಿಂತು, ಜೊತೆ ಜೊತೆಯಾಗಿ ನಡೆದವರು ಅವರ ಬಾಳ ಸಂಗಾತಿ ಜ್ಯೋತಿ ಪ್ರೇಮ್. ಪ್ರೇಮ್ ರೀಲ್ ಅಷ್ಟೇ ಅಲ್ಲ ರಿಯಲ್ ಲೈಫ್‌ನಲ್ಲೂ 'ಲವ್ಲಿ' ಸ್ಟಾರ್ ಅಂತಾರೆ ಅವರ ಪತ್ನಿ ಜ್ಯೋತಿ.
ನಟ ಪ್ರೇಮ್ ಗೆ ಅಮೃತ ಮತ್ತು ಏಕಾಂತ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಸದ್ಯ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇತ್ತೀಚೆಗಷ್ಟೇ ಅಮೃತ 'ಟಗರು'ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ.
ಸ್ಟಾರ್ ನಟನೇ ಆದರೂ ಕೂಡ ಪ್ರೇಮ್ ತಮ್ಮ ಮಕ್ಕಳಿಗೆ ಜೀವನದ ಪಾಠವನ್ನು ಚೆನ್ನಾಗಿ ಕಳಿಸಿದ್ದಾರೆ. ಇಂದಿಗೂ ಕೂಡ ಇವರ ಮಕ್ಕಳು ಸಾರ್ವಜನಿಕ ವಾಹನಗಳಲ್ಲಿ ಓಡಾಡುವುದು ಇದಕ್ಕೆ ಕನ್ನಡಿ ಹಿಡಿದಂತಿದೆ.
ಇದುವರೆಗೂ 25ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ 'ನೆನಪಿರಲಿ' ಚಿತ್ರದ ಕಿಶೋರ್ ಪಾತ್ರಕ್ಕೆ ಅತ್ಯುತ್ತಮ ನಟ ಎಂಬ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿರುವ ಲವ್ಲಿ ಸ್ಟಾರ್ ಪ್ರೇಮ್ ಇನ್ನೂ ಹೆಚ್ಚೆಚ್ಚೂ ಸಿನಿಮಾಗಳಲ್ಲಿ ಅಭಿನಯಿಸಲಿ, ಹೆಚ್ಚು ಪ್ರಶಸ್ತಿಗಳನ್ನು ಪಡೆಯುವಂತಾಗಲಿ.