Team India: ಐಸಿಸಿ ಟ್ರೋಫಿ ಮಾತ್ರವಲ್ಲ… ಈ ಸ್ಥಾನ ಉಳಿಯಬೇಕೆಂದರೆ 3ನೇ ಏಕದಿನದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕು!
ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ಗಳ ಸೋಲು ಕಂಡಿತ್ತು. ಇದೀಗ ಸರಣಿಯ ಮೂರನೇ ಪಂದ್ಯದಲ್ಲಿ ಗೆಲ್ಲಲೇ ಬೇಕು ಎಂಬ ಪರಿಸ್ಥಿತಿ ಭಾರತಕ್ಕೆ ಎದುರಾಗಿದೆ.
ಈ ಪಂದ್ಯ ಭಾರತಕ್ಕೆ ಸರಣಿ ಗೆಲ್ಲಲು ಮಾತ್ರವಲ್ಲ, ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನವನ್ನೂ ಕಾಪಾಡಿಕೊಳ್ಳಲು ಬಹುಮುಖ್ಯವಾಗಿದೆ.
ಈಗಾಗಲೇ ಭಾರತ 44 ಏಕದಿನ ಪಂದ್ಯಗಳನ್ನು ಗೆದ್ದು, 114 ಅಂಕಗಳೊಂದಿಗೆ ನಂಬರ್ ವನ್ ಸ್ಥಾನದಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ 32 ಪಂದ್ಯಗಳಲ್ಲಿ 112 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಈ ಎರಡು ತಂಡಗಳ ನಡುವಿನ ಅಂಕಗಳಲ್ಲಿರುವ ಅಂತರ ಬಲು ಕಡಿಮೆ.
ಕಳೆದ 6 ವರ್ಷಗಳಿಂದ ಚೆನ್ನೈನ ಚೆಪಾಕ್ ಮೈದಾನದಲ್ಲಿ ಗೆಲುವು ಸಾಧಿಸಲು ಟೀಂ ಇಂಡಿಯಾ ಹಾತೊರೆಯುತ್ತಿದೆ. 2019 ರಲ್ಲಿ ಕೊನೆಯ ಬಾರಿ ಟೀಂ ಇಂಡಿಯಾ ಏಕದಿನ ಪಂದ್ಯವನ್ನಾಡಿತ್ತು. ಆದರೆ ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತವನ್ನು 8 ವಿಕೆಟ್’ಗಳಿಂದ ಸೋಲಿಸಿತು.
ಈ ಮೈದಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟು 6 ಪಂದ್ಯಗಳಲ್ಲಿ 401 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಅವರು ಆಡಿದ 7 ಪಂದ್ಯಗಳಲ್ಲಿ 283 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧ ಶತಕಗಳು ಸೇರಿವೆ.