One-in-two-million: ಮೀನುಗಾರರ ಬಲೆಗೆ ಬಿದ್ದ ಅಪರೂಪದ ನೀಲಿ ಸಿಗಡಿ..!
ನೀಲಿ ಬಣ್ಣದ ವಿಶೇಷ ಸಿಗಡಿ ತಳಿಯೊಂದು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ಸ್ಕಾಟಿಷ್ ಮೀನುಗಾರರ ಬಲೆಗೆ ಬಿದ್ದಿದೆ. ನೀಲಿ ಸಿಗಡಿ ಸಿಕ್ಕಿರುವುದು ಅಪರೂಪದಲ್ಲಿಯೇ ಅಪರೂಪ ಎಂದು ಹೇಳಲಾಗುತ್ತಿದೆ. ಮೀನುಗಾರ ರಿಕಿ ಗ್ರೀನ್‌ಹೋ(Greenhowe), ಅಬರ್ಡೀನ್ ತೀರದಲ್ಲಿ ಮೀನುಗಾರಿಕೆಗೆ ಹೊದಾಗ ಸುಮಾರು 1.36 ಕೆಜಿ ತೂಕದ ನೀಲಿ ಸಿಗಡಿ ಸಿಕ್ಕಿದೆ. ಇದರ ಚಿತ್ರವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ ಗ್ರೀನ್‌ಹೋ, ತನ್ನ ಮೀನುಗಾರಿಕಾ ದೋಣಿಯಲ್ಲಿ ಸಾಗುತ್ತಿರುವಾಗ ಅಪರೂಪದಲ್ಲಿಯೇ ಅಪರೂಪವೆನ್ನುವ ಸಿಗಡಿ ತಳಿಯನ್ನು ಕಂಡಿದ್ದಾರೆ. ಈ ರೀತಿಯ ಸಿಗಡಿಯನ್ನು ಅವರು ಹಿಂದೆಂದೂ ಕಂಡಿರಲಿಲ್ಲ. ಕೂಡಲೇ ಅದಕ್ಕೆ ಬಲೆ ಬಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಪರೂಪದ ಸಿಗಡಿಯನ್ನು ಹಿಡಿದ ಬಳಿಕ ಖುಷಿಯಲ್ಲಿ ತೇಲಾಡಿದ್ದಾರೆ.
ಅಪರೂಪದ ಸಿಗಡಿಯನ್ನು ಹಿಡಿದಿರುವ ಗ್ರೀನ್‌ಹೋ ಅದನ್ನು ಅಕ್ವೇರಿಯಂಗೆ ನೀಡಲು ಅಥವಾ ಮತ್ತೆ ಸಮುದ್ರಕ್ಕೆ ಬಿಡಲು ನಿರ್ಧರಿಸಿದ್ದಾರಂತೆ. ನಾನು ಈ ಅಪರೂಪದ ಸಿಗಡಿಯನ್ನು ಮ್ಯಾಕ್‌ಡಫ್ ಅಕ್ವೇರಿಯಂಗೆ ನೀಡುತ್ತೇನೆ, ಇಲ್ಲದಿದ್ದರೆ ಅದನ್ನು ವಾಪಸ್ ಸಮುದ್ರಕ್ಕೆ ಬಿಡುತ್ತೇನೆಂದು ಅವರು ಹೇಳಿಕೊಂಡಿದ್ದಾರೆ.
‘ನಾನು ಈ ರೀತಿಯ ಅಪರೂಪದ ನೀಲಿ ಸಿಗಡಿಯನ್ನು ಈ ಹಿಂದೆ ಎಂದೂ ಕಂಡಿಲ್ಲ. 14 ವರ್ಷದಿಂದ ಮೀನು ಹಿಡಿಯುತ್ತಿರುವ ನಾನು ಇದೇ ಮೊದಲ ಬಾರಿಗೆ ಈ ರೀತಿಯ ಸಿಗಡಿಯನ್ನು ನೋಡಿದ್ದೇನೆ. ಇದು ನನಗೆ ತುಂಬಾ ವಿಶೇಷವೆನಿಸುತ್ತದೆ’ ಎಂದು ಗ್ರೀನ್‌ಹೋ ಖುಷಿ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಜಿಯೋಗ್ರಾಫಿಕ್ ಪ್ರಕಾರ, ಈ ರೀತಿಯ ನೀಲಿ ಸಿಗಡಿಗಳು ಆನುವಂಶಿಕ ಅಸಹಜತೆಯಿಂದಾಗಿ ಇತರ ಬಣ್ಣಗಳನ್ನು ಪಡೆದುಕೊಳ್ಳುತ್ತವಂತೆ.