ಹಲ್ಲು ಹುಳುಕಿನಿಂದ ನೋವು ಅನುಭವಿಸುತ್ತಿದ್ದೀರಾ?; ಹಲ್ಲು ಹುಳುಕು ತಡೆಗಟ್ಟಲು ಈ ರೀತಿ ಮಾಡಿ
ಹೆಚ್ಚು ಆಮ್ಲೀಯ ಪದಾರ್ಥಗಳು & ಸಕ್ಕರೆ ಅಂಶವುಳ್ಳ ಆಹಾರ ಪದಾರ್ಥಗಳು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ. ಹಲ್ಲಿನ ಮೇಲ್ಪದರ ಎನಾಮಿಲ್ ದೇಹದ ಅತ್ಯಂತ ಕಠಿಣ ಭಾಗವಾಗಿದ್ದು, ಅತಿಹೆಚ್ಚು ಖನಿಜಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಹಲ್ಲುಗಳು ದೇಹದಲ್ಲೇ ಕಠಿಣ ಅಥವಾ ಗಟ್ಟಿಯಾದ ಭಾಗವಾಗಿರುತ್ತವೆ. ನಾವು ಸೇವಿಸುವ ಅಸಹಜ ಆಹಾರದ ಪರಿಣಾಮ ಖನಿಜಾಂಶದ ಕೊರತೆ ಉಂಟಾಗಿ, ಹಲ್ಲುಗಳ ಅಂಗಾಂಶವು ತನ್ನ ಗುಣ ಕಳೆದುಕೊಂಡು ಹುಳುಕಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ದಂತಕ್ಷಯ ಎಂತಲೂ ಕರೆಯಲಾಗುತ್ತದೆ.
ದಂತಕ್ಷಯ ಬಹುತೇಕ ಎಲ್ಲರೂ ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇದರಿಂದ ಹಲ್ಲುಗಳು ಶಾಶ್ವತವಾಗಿ ಹಾನಿಗೊಳಗಾಗುತ್ತವೆ. ಇದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ನಾವು ತಿನ್ನುವ ಆಹಾರ ಮತ್ತು ಲಾಲಾರಸದೊಂದಿಗೆ ಬ್ಯಾಕ್ಟೀರಿಯಾಗಳು ಸೇರಿ ಹಲ್ಲಿನ ಮೇಲೆ ಪ್ಲಾಕ್ ಎಂಬ ಜಿಗುಟಾದ ಪದರವನ್ನು ರೂಪಿಸುತ್ತವೆ. ಇದರಿಂದ ಉತ್ಪತ್ತಿಯಾಗುವ ಆಮ್ಲವು ನಿಧಾನವಾಗಿ ಹಲ್ಲಿನ ಮೇಲಿನ ಗಡುಸಾದ ಹೊಳೆಯುವ ಪದರ ಎನಾಮಲ್ ಅನ್ನು ಕರಗಿಸುತ್ತದೆ. ಎನಾಮಲ್ ದುರ್ಬಲಗೊಳ್ಳುತ್ತಿದ್ದಂತೆ ಹಲ್ಲಿನ ಕೊಳೆಯುವಿಕೆಯ ಅಪಾಯ ಹೆಚ್ಚಾಗುತ್ತದೆ.
ತುಂಬಾ ಸಿಹಿ, ಜಿಗುಟಾದ & ಆಮ್ಲೀಯ ಆಹಾರ ಪದಾರ್ಥಗಳ ಸೇವನೆ & ಲಾಲಾರಸ ಉತ್ಪತ್ತಿಯನ್ನು ಕಡಿಮೆ ಮಾಡುವ ಔಷಧಿಗಳ ಸೇವನೆ. ಪ್ರತಿದಿನ ಬ್ರಷ್ & ಫ್ಲಾಸ್ ಮಾಡಲು ವಿಫಲವಾದಾಗ ಹಲ್ಲು ಹುಳುಕಾಗುವ ಅಪಾಯ ಹೆಚ್ಚಾಗುತ್ತದೆ. ದಂತಕ್ಷಯ ಅಥವಾ ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಬಹುದು. ಪ್ರತಿದಿನ ಹಲ್ಲುಗಳನ್ನು ಉಜ್ಜುವುದು ಪ್ರಮುಖವಾಗಿ ಆಹಾರ ಸೇವಿಸಿದ ನಂತರ ಹಲ್ಲು ಉಜ್ಜುವುದು. ಇದರ ಜೊತೆಗೆ ಫ್ಲಾಸ್ಗಳ ಮೂಲಕ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸುವುದು ಮುಖ್ಯ.
ಸಿಹಿಯಾದ ಜಿಗುಟಾದ ಆಮ್ಲೀಯ ಆಹಾರ ಅಥವಾ ಪಾನೀಯಗಳ ಸೇವನೆ ಕಡಿಮೆ ಮಾಡುವುದು, ಫ್ಲೋರೈಡ್‌ಯುಕ್ತ ಟೂತ್ಪೇಸ್ಟ್ ಬಳಕೆ ಮಾಡುವುದು, ಆಂಟಿ ಬ್ಯಾಕ್ಟೀರಿಯಲ್ ಮೌತ್ವಾಶ್ಗಳ ಬಳಕೆಯಿಂದ ದಂತಕ್ಷಯಕ್ಕೆ ಕಾರಣವಾಗುವ ಸೂಕ್ಷ್ಮ ಕ್ರಿಮಿಗಳನ್ನು ಕಡಿಮೆ ಮಾಡಬಹುದು. ನಿಯಮಿತ ದಂತ ಪರೀಕ್ಷೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರಿಂದ ಹಲ್ಲುಗಳನ್ನು ಶುಚಿ ಮಾಡಿಸಿಕೊಳ್ಳುವುದರಿಂದ ದಂತ ಕ್ಷಯವನ್ನು ತಡೆಯಬಹುದು.
ಹಲ್ಲು ಹುಳುಕು ಎಷ್ಟು ಪ್ರಮಾಣದಲ್ಲಿ ಇರುವುದು ಎಂಬುದರ ಮೇಲೆ ಚಿಕಿತ್ಸಾ ವಿಧಾನ ಅವಲಂಬಿತವಾಗಿರುತ್ತದೆ. ಯಾವುದೇ ಹಂತದಲ್ಲೂ ಚಿಕಿತ್ಸೆ ನೀಡದೆ ಸರಿಪಡಿಸಲಾಗುವುದಿಲ್ಲ. ಹುಳುಕು ಆರಂಭಿಕ ಹಂತದಲ್ಲಿದ್ದು, ಆಳವಾಗಿಲ್ಲದಿದ್ದಲ್ಲಿ ಅದನ್ನು ಸರಳ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಹೀಗೆ ಮಾಡದೆ ಚಿಕಿತ್ಸೆ ಮುಂದೂಡಿದರೆ ಹುಳುಕು ಮುಂದುವರಿದು ರೂಟ್ ಕೆನಾಲ್ ಚಿಕಿತ್ಸೆಯ ಅವಶ್ಯಕತೆ ಉಂಟಾಗುತ್ತದೆ. ಹೀಗಾಗಿ ಹಲ್ಲುಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ...