ವಿಶ್ವಕಪ್: ಈ ವಿಷಯದಲ್ಲಿ ವಿರಾಟ್ ಕೊಹ್ಲಿಗಿಂತ ಮುಂದಿದ್ದಾರೆ ಪಾಕಿಸ್ತಾನದ ಅದ್ಭುತ ಬ್ಯಾಟ್ಸ್‌ಮನ್
ನಿನ್ನೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭರ್ಜರಿ 7 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ಇನ್ನೂ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಏತನ್ಮಧ್ಯೆ, ಪಾಕಿಸ್ತಾನದ ಅದ್ಭುತ ಬ್ಯಾಟ್ಸ್‌ಮನ್ ಒಂದು ವಿಷಯದಲ್ಲಿ ಭಾರತದ ದಂತಕಥೆ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 21 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗದೆ ಉಳಿದರು. ಈ ವೇಳೆ ಅವರು 4 ಬೌಂಡರಿಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ರಿಜ್ವಾನ್ ಗೆಲುವಿನ ರೂವಾರಿ ಆದರು. ಅಷ್ಟೇ ಅಲ್ಲ, ಮೊಹಮ್ಮದ್ ರಿಜ್ವಾನ್ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಮತ್ತು ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟಾಪ್ 5 ರಲ್ಲಿ ಸ್ಥಾನ ಪಡೆದರು .
ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಮೊಹಮ್ಮದ್ ರಿಜ್ವಾನ್ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟಾಪ್-5 ರೊಳಗೆ ಪ್ರವೇಶಿಸಿದ್ದಾರೆ.: 7 ಇನ್ನಿಂಗ್ಸ್‌ಗಳಲ್ಲಿ 359 ರನ್ ಗಳಿಸಿರುವ ಇವರು ಪ್ರಸ್ತುತ ವಿಶ್ವಕಪ್ 2023 ಟಾಪ್ ರನ್ ಸ್ಕೋರರ್ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ರಿಜ್ವಾನ್ ಇಲ್ಲಿಯವರೆಗೆ 1 ಶತಕ ಮತ್ತು 1 ಅರ್ಧಶತಕ ಗಳಿಸಿದ್ದಾರೆ.
2023ರ ವಿಶ್ವಕಪ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 354 ರನ್ ಕಲೆಹಾಕಿರುವ ಭಾರತದ ರನ್ ಮೆಷನ್ ಖ್ಯಾತಿಯ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಬಾರಿಯ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 1 ಶತಕ ಮತ್ತು 3 ಅರ್ಧ ಶತಕಗಳ ಸಹಾಯದಿಂದ ಒಟ್ಟು 354 ರನ್ ಕಲೆಹಾಕಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿದ ಅಗ್ರ ಹತ್ತು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅಗ್ರಸ್ಥಾನದಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಮೂರು ಶತಕಗಳನ್ನು ಬಾರಿಸಿರುವ ಕ್ವಿಂಟನ್ ಡಿ ಕಾಕ್ 6 ಪಂದ್ಯಗಳಲ್ಲಿ 431 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ 2 ಶತಕ ಮತ್ತು 1 ಅರ್ಧಶತಕದ ಸಹಾಯದಿಂದ ಡೇವಿಡ್ ವಾರ್ನರ್ ಇದುವರೆಗೂ ಒಟ್ಟು 413 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್‌ನ ಈ ಯುವ ಆಲ್‌ರೌಂಡರ್ ರಚಿನ್ ರವೀಂದ್ರ 2 ಶತಕ ಮತ್ತು ಒಂದು ಅರ್ಧ ಶತಕಗಳನ್ನು ಗಳಿಸುವ ಮೂಲಕ 2023ರ ವಿಶ್ವಕಪ್ ಪಂದ್ಯದಲ್ಲಿ ಇದುವರೆಗೂ 406 ರನ್ ಕಲೆಹಾಕಿದ್ದು, ಗರಿಷ್ಠ ರನ್ ಗಳಿಸಿದ ಅಗ್ರ ಹತ್ತು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದುವರೆಗೆ ವಿಶ್ವಕಪ್‌ನ 6 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳ ಸಹಾಯದಿಂದ 398 ರನ್ ಗಳಿಸಿದ್ದಾರೆ. ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಬಳಿಕ ಭಾರತದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ 4 ನೇ ಸ್ಥಾನಕ್ಕೇರಿದರು.