ಈ ಎಲೆಯ ರಸವನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ !ಪುಟ್ಟ ಮಕ್ಕಳನ್ನು ಕಾಡುವ ಜಂತು ಹುಳ, ಹೊಟ್ಟೆನೋವಿನ ಸಮಸ್ಯೆಗೆ ಇದುವೇ ಪರಿಹಾರ
ಪುಟ್ಟ ಮಕ್ಕಳು ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಜತೆಗೆ ಚಾಕಲೇಟು ಸಿಹಿ ತಿನಿಸುಗಳ ಮೋಹ ಬೇರೆ ಜಾಸ್ತಿ. ಇದರಿಂದ ಹುಳುವಿನ ಬಾಧೆ ಮಕ್ಕಳನ್ನು ಕಾಡುತ್ತಲೇ ಇರುತ್ತದೆ.
ಹೊಟ್ಟೆಯಲ್ಲಿ ಜಂತು ಹುಳ ಹೆಚ್ಚಾದಾಗ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗುದದ್ವಾರದಲ್ಲಿ ಕೆರೆತ ಉಂಟಾಗುತ್ತದೆ. ಇದರಿಂದ ಮಕ್ಕಳಿಗೂ ಬಹಳ ತೊಂದರೆಯಾಗುತ್ತದೆ.
ಆದರೆ ಮಕ್ಕಳಿಗೆ ಈ ಒಂದು ಎಲೆಯ ರಸವನ್ನು ತೆಗೆದು ಕುಡಿಸಿದರೆ ಮತ್ತೆ ಎಂದಿಗೂ ಅವರನ್ನು ಹುಳದ ಸಮಸ್ಯೆ ಕಾಡುವುದಿಲ್ಲ. ಮಾತ್ರವಲ್ಲ ಈ ರಸ ಕುಡಿದ ಮಕ್ಕಳಿಗೆ ಉದರದ ಯಾವ ಸಮಸ್ಯೆಯೂ ಬರುವುದಿಲ್ಲ.
ನಾವಿಲ್ಲಿ ಹೇಳುತ್ತಿರುವುದು ಪಂಚಪತ್ರೆ ಎಲೆಯ ಬಗ್ಗೆ. ಈ ಗಿಡ ನೋಡಲು ಸೇವಂತಿಗೆ ಗಿಡವನ್ನು ಹೋಲುತ್ತದೆ. ಎಲೆಯ ಸುವಾಸನೆ ಕೂಡಾ ಹಾಗೆಯೇ ಇರುತ್ತದೆ. ಆದರೆ ಮಕ್ಕಳ ಪಾಲಿಗೆ ಇದು ಅಮೃತ ಇದ್ದ ಹಾಗೆ.
ಜಂತು ಹುಳದ ಕಾರಣ ಗುದದ್ವಾರದಲ್ಲಿ ಕೆರೆತ ಉಂಟಾದಾಗ ಪಂಚಪತ್ರೆಯ ಎಲೆ ತೆಗೆದು ಅರೆದು ಹೊಕ್ಕಳ ಸುತ್ತ ಹಚ್ಚಬೇಕು. ಮೂರು ದಿನ ಹೀಗೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ನೆನಪಿರಲಿ ದಿನಕ್ಕೆ ಒಂದು ಬಾರಿ ಹಚ್ಚಿದರೆ ಸಾಕಾಗುತ್ತದೆ.
ಸ್ವಲ್ಪ ದೊಡ್ಡ ಮಕ್ಕಳಾದರೆ ನಾಲ್ಕೈದು ಪತ್ರೆಯನ್ನು ಕಿವುಚಿ ರಸ ತೆಗೆದು ಕುಡಿಸಬಹುದು. ಇದನ್ನು ಬೆಳಗ್ಗೆಯೇ ಕುಡಿಸಿದರೆ ಒಳ್ಳೆಯದು. ಅಲ್ಲದೆ ದೊಡ್ಡ ಮಕ್ಕಳಿಗೆ ಈ ರಸವನ್ನು ಮೂಗಿನ ಬಳಿ ತಂದು ಅದರ ಘಮ ತೆಗೆದುಕೊಳ್ಳುವಂತೆ ಹೇಳಬೇಕು.
ಇನ್ನು ಈ ಎಲೆಯನ್ನು ಬಿಸಿಯಲ್ಲಿ ಸ್ವಲ್ಪ ಬಾಡಿಸಿ ರಸ ತೆಗೆದು ಮಕ್ಕಳಿಗೆ ಕುಡಿಸಿದರೆ ಹೊಟ್ಟೆ ನೋವಿನಿಂದಲೂ ತಕ್ಷಣ ಪರಿಹಾರ ಸಿಗುತ್ತದೆ. ಇದು ಹಿರಿಯರಿಗೂ ಔಷಧವಾಗಿ ಕೆಲಸ ಮಾಡುತ್ತದೆ.
ಮಕ್ಕಳಿಗೆ ಸರಿಯಾಗಿ ಹೊಟ್ಟೆ ಕ್ಲೀನ್ ಆಗದೆ ಕಿರಿ ಕಿರಿ ಉಂಟಾದರೆ ಈ ಎಲೆಯನ್ನು ಅರೆದು ರಸ ತೆಗೆದು ಕುಡಿಸಿದರೆ, ಸರಾಗವಾಗಿ ಮಲ ಹೊರ ಹೋಗುವುದು.
ಶೀತದಿಂದ ಕಿವಿ ನೋವು ಕಾಣಿಸಿಕೊಂಡರೆ ಈ ಪತ್ರೆಯ ರಸ ತೆಗೆದು ಮೂರು ಹನಿ ಕಿವಿಗೆ ಹಾಕಬೇಕು. ಆದರೆ ಇಲ್ಲಿ ನೆನಪಿರಬೇಕಾದ ಅಂಶ ಎಂದರೆ ಕಿವಿಗೆ ಈ ರಸ ಹಾಕುವಾಗ ಸರಿಯಾಗಿ ಸೋಸಿಕೊಳ್ಳಬೇಕು.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.