ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತವೆ ನಿಮ್ಮ ಸುತ್ತಲೇ ಇರುವ ಈ ವಸ್ತುಗಳು
ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಇತ್ತೀಚಿಗೆ ಬಹುತೇಕರು ಎದುರಿಸುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ದುಬಾರಿ ಪ್ರಾಡಕ್ಟ್ ಮೊರೆ ಹೋಗುವ ಬದಲು ಮನೆಯಲ್ಲಿಯೇ ಇರುವ ಸುಲಭ ಪರಿಹಾರ ಮಾರ್ಗಗಳನ್ನು ಕಂಡು ಕೊಳ್ಳಬಹುದು. ಹೀಗೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ, ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ದಾಸವಾಳದ ಹೂವನ್ನು 20 ನಿಮಿಷಗಳ ಕಾಲ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದು ತಣ್ಣಗಾದ ಬಳಿಕ ನೀರಿನ ಸಮೇತ ದಾಸವಾಳ ಹೂಗಳ ಪೇಸ್ಟ್ ತಯಾರಿಸಿ. ಹೀಗೆ ತಯಾರಿಸಿದ ಪೇಸ್ಟ್ ಅನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಟ್ಟು ಶಾಂಪೂ ಮಾಡಿ. ಕೆಲವೇ ಸಮಯದಲ್ಲಿ ನಿಮಗೆ ಬದಲಾವಣೆ ಗೊತ್ತಾಗುತ್ತದೆ.
ತಲೆ ಕೂದಲು ಬೆಳ್ಳಗಾಗದಂತೆ ತಡೆಯುವ ಶಕ್ತಿ ಹೀರೆಕಾಯಿಗೂ ಇದೆ. ಹೀರೆಕಾಯಿಯನ್ನು ತುಂಡು ಮಾಡಿ, ಒಣಗಿಸಿಕೊಳ್ಳಿ. ನಂತರ ಈ ತುಂಡುಗಳನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಮೂರು ದಿನಗಳವರೆಗೆ ಹಾಗೆಯೇ ಬಿಡಿ. ನಂತರ ಈ ಎಣ್ಣೆಯನ್ನು ಹಿರೇಕಾಯಿ ಸಮೇತ ಕಡಿಮೆ ಉರಿಯಲ್ಲಿ ಕಪ್ಪು ಬಣ್ಣಕ್ಕೆ ಬರುವವರೆಗೆ ಕಾಯಿಸಿ. ಈಗ ಈ ಎಣ್ಣೆಯನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ತಲೆ ಕೂದಲಿಗೆ ಹಚ್ಚುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
ಕೆಂಪು ಹರಿವೆ ಸೊಪ್ಪು ಕೂಡಾ ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಮತ್ತು ಪರಿಣಾಮಕಾರಿ ಪರಿಹಾರ. ಈ ಹರಿವೆ ಸೊಪ್ಪನ್ನು ನೀರು ಬೆರೆಸಿ ರುಬ್ಬಿಕೊಂಡು ಅದರ ರಸ ತೆಗೆಯಬೇಕು. ಹೀಗೆ ತೆಗೆದ ರಸವನ್ನು ಕೂದಲಿಗೆ ಹಚ್ಚಿ ಎರಡು ಗಂಟೆಗಳ ಕಾಲ ನಂತರ ಸ್ನಾನ ಮಾಡಬಹುದು. ನಿಮ್ಮ ಬಿಳಿ ಕೂದಲು ನಿಸರ್ಗಿಕ ರೀತಿಯಲ್ಲಿ ಕಪ್ಪಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಗೆ ಮತ್ತೊಂದು ಬೆಸ್ಟ್ ಮದ್ದು ಎಂದರೆ ಎಳ್ಳೆಣ್ಣೆ ಮತ್ತು ಕ್ಯಾರೆಟ್ ರಸ. ಈ ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಚಮಚ ಮೆಂತ್ಯೆ ಪುಡಿಯನ್ನು ಸೇರಿಸಬೇಕು. ಈ ಮಿಶ್ರಣವನ್ನು ತಲೆ ಕೂದಲಿಗೆ ಹಚ್ಚಬೇಕು. ಹೀಗೆ ಮಾಡುತ್ತಾ ಬಂದರೆ ತಲೆ ಕೂದಲು ಬೆಳ್ಳಗಾಗುವುದೇ ಇಲ್ಲ.
ಶುಂಠಿ ಕೂಡಾ ಚಿಕ್ಕ ವಯಸ್ಸಿಗೆ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಹಾಲು ಅಥವಾ ಜೋಜೋಬಾ ಆಯಿಲ್ ಜೊತೆಗೆ ತುರಿದ ಶುಂಠಿಯನ್ನು ಹಾಕಿ ಅದನ್ನು ಕೂದಲಿಗೆ ಹಚ್ಚಬೇಕು. 15 ನಿಮಿಷಗಳ ನಂತರ ತಲೆಗೆ ಸ್ನಾನ ಮಾಡಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ.