Russia-Ukraine War: ರಕ್ಷಣೆಗಾಗಿ ಮೋದಿ ಸರ್ಕಾರಕ್ಕೆ ಮನವಿ ಮಾಡಿದ ಉಕ್ರೇನ್ ಮೂಲದ ಭಾರತೀಯ ಸೊಸೆ
ಪೋಲೆಂಡ್‌ನ ವಾರ್ಸಾದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ನೂರಾರು ಜನರು ಆಶ್ರಯ ಪಡೆದುಕೊಂಡಿದ್ದು, ತಮ್ಮನ್ನು ರಕ್ಷಿಸಿ ಕರೆದೊಯ್ಯುವಂತೆ ಮನವಿ ಮಾಡಿಕೊಂಡಿದ್ದಾರೆ. ತಮಗೆ ಸಹಾಯ ಮಾಡುವಂತೆ ಅವರು ತಮ್ಮ ತಮ್ಮ ದೇಶಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಶಿಬಿರಕ್ಕೆ ಆಹಾರ, ಔಷಧ ಸೇರಿದಂತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಶಿಬಿರದಲ್ಲಿಯೇ ಉಕ್ರೇನ್ ಮೂಲದ ಭಾರತೀಯ ಸೊಸೆ ಪತ್ತೆಯಾಗಿದ್ದಾರೆ.
ಸದ್ಯ ಗರ್ಭಿಣಿಯಾಗಿರುವ ಮಹಿಳೆಯೊಬ್ಬರು ಭಾರತೀಯ ಪತಿಯಿಂದ ಬೇರ್ಪಟ್ಟಿದ್ದು, ಸಂಕಷ್ಟಕ್ಕೆ ಸಿಲುಕಿರುವ ನನ್ನನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಪತಿ ದೆಹಲಿಯಲ್ಲಿದ್ದು, ನನ್ನನ್ನು ಇಲ್ಲಿಂದ ಭಾರತಕ್ಕೆ ಕರೆದೊಯ್ಯಿರಿ ಎಂದು ಜೀ ಮೀಡಿಯಾ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತೀಯ ಪ್ರಜೆಯೊಂದಿಗೆ ಉಕ್ರೇನಿಯನ್ ಮಹಿಳೆಯ ವಿವಾಹವಾಗಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಚಿತ್ರದಲ್ಲಿ ಭಾರತೀಯ ಪ್ರಜೆಯು ಉಕ್ರೇನಿಯನ್ ಮಹಿಳೆಗೆ ಮಂಗಳಸೂತ್ರವನ್ನು ಕಟ್ಟುತ್ತಿರುವುದನ್ನು ಕಾಣಬಹುದು.
ಉಕ್ರೇನಿಯನ್ ಮಹಿಳೆ ಹಿಂದೂ ಸಂಪ್ರದಾಯದ ಪ್ರಕಾರ ಭಾರತೀಯ ಪ್ರಜೆಯನ್ನು ವಿವಾಹವಾಗಿದ್ದಾರೆ.
ಉಕ್ರೇನ್ ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯನ್ನು ಅಲ್ಲಿನ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಈ ಜೋಡಿ ಬೇರ್ಪಟ್ಟಿದೆ. ದೆಹಲಿಯಲ್ಲಿ ನನ್ನ ಪತಿ ಇದ್ದಾರೆ, ನನ್ನನ್ನು ರಕ್ಷಿಸಿ ಉಕ್ರೇನ್ ನಿಂದ ಕರೆದೊಯ್ಯುವಂತೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.