WhatsAppಗೆ ಭಾರಿ ಪೆಟ್ಟು, ವೇದಿಕೆ ತೊರೆದು Signalಗೆ ಮಣೆ ಹಾಕಿದ ಹಲವು ಕಂಪನಿಗಳು
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಪೇಮೆಂಟ್ ಗೇಟ್ ವೇ ಆಪ್ ಆಗಿರುವ PhonePe ಸಿಇಓ ಸೇರಿದಂತೆ ಕಂಪನಿಯ ಸುಮಾರು 1000ಕ್ಕೂ ಅಧಿಕ ನೌಕರರು ತಮ್ಮ ಮೊಬೈಲ್ ನಿಂದ ವಾಟ್ಸ್ ಆಪ್ ತೆಗೆದುಹಾಕಿದ್ದಾರೆ. ಈ ಎಲ್ಲಾ ನೌಕರರು ತಮ್ಮ ಕೆಲಸಕ್ಕಾಗಿ signal ಆಪ್ ಬಳಸಲು ಆರಂಭಿಸಿದ್ದಾರೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ನಿಗಮ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.
ಮಹಿಂದ್ರಾ ಗ್ರೂಪ್ ಚೇರ್ಮನ್ ಆಗಿರುವ ಆನಂದ್ ಮಹಿಂದ್ರಾ ಕೂಡ WhatsApp ವೇದಿಕೆಯನ್ನು ತೊರೆದಿದ್ದಾರೆ. ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು ತಾವು ವಾಟ್ಸ್ ಆಪ್ ತೊರೆದು ಸಿಗ್ನಲ್ ಗೆ ಬಂದಿರುವುದಾಗಿ ಹೇಳಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ಮುಂಚೂಣಿಯಲ್ಲಿರುವ ಒಂದು ದಿನಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಟಾಟಾ ಸಮೂಹದ ಚೇರ್ಮನ್ ಆಗಿರುವ ಎನ್. ಚಂದ್ರಶೇಖರನ್ ಕೂಡ ಇದೀಗ ವಾಟ್ಸ್ ಆಪ್ ಬದಲು ಸಿಗ್ನಲ್ ಬಳಕೆಮಾಡಲು ಆರಂಭಿಸಿದ್ದಾರೆ. ಇದಲ್ಲದೆ ಕಂಪನಿಯ ಹಲವು ಉನ್ನತ ಅಧಿಕಾರಿಗಳು ಕೂಡ ವಾಟ್ಸ್ ಆಪ್ ವೇದಿಕೆಯನ್ನು ತೊರೆದಿದ್ದಾರೆ.
ವರದಿಗಳ ಪ್ರಕಾರ ಪೇಮೆಂಟ್ ವೇದಿಕೆಯಾಗಿರುವ Paytm ಸಿಇಓ ವಿಜಯ್ ಶೇಖರ್ ಶರ್ಮಾ ಕೂಡ ತಮ್ಮ ತಂಡಕ್ಕೆ ಸಂವಹನಕ್ಕಾಗಿ WhatsApp ನಿಂದ ದೂರ ಉಳಿಯಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲೋನ್ ಮಸ್ಕ್ ಇತ್ತೀಚೆಗಷ್ಟೇ ವಾಟ್ಸ್ ಆಪ್ ಗೌಪ್ಯತಾ ನೀತಿಯಿಂದ ತೊಂದರೆಗೀಡಾದವರು ಸಿಗ್ನಲ್ ಬಳಕೆ ಮಾಡಬಹುದು ಎಂಬ ಸಲಹೆ ನೀಡಿದ್ದರು. ಅವರ ಈ ಸಲಹೆಯ ಬಳಿಕ ಇಡೀ ವಿಶ್ವಾದ್ಯಂತ ಜನರು ವಾಟ್ಸ್ ಆಪ್ ಅನ್ನು ಅನ್ಇನ್ಸ್ಟಾಲ್ ಮಾಡಲು ಆರಂಭಿಸಿದ್ದಾರೆ.