Photos: ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ; ವಿಶೇಷತೆ ಏನ್ ಗೊತ್ತಾ?
ಈ ಸ್ಮಾರಕವನ್ನು 176 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯಲ್ಲಿ ನಿರ್ಮಿಸಲಾಗಿದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತೆ ನಂತರ ಇಲ್ಲಿಯವರೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 25,942 ಯೋಧರ ಹೆಸರು, ಹುದ್ದೆ ಹಾಗೂ ಅವರು ಸೇರಿದ್ದ ಪಡೆಯನ್ನು 16 ಗ್ರಾನೈಟ್ ಗೋಡೆಗಳ ಮೇಲೆ ಬರೆದು ಸ್ಮರಿಸಲಾಗಿದೆ.
ಈ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೇವಲ ಭಾರತೀಯ ಸೇನಾ ಪಡೆಯ ಹುತಾತ್ಮ ಯೋಧರಷ್ಟೇ ಅಲ್ಲದೆ, ವಾಯು ಪಡೆ ಮತ್ತು ನೌಕಾ ಪಡೆಯ ಹುತಾತ್ಮ ಯೋಧರನ್ನೂ ಈ ಸ್ಮಾರಕದಲ್ಲಿ ಸ್ಮರಿಸಲಾಗಿದೆ.
ಸ್ವಾತಂತ್ರ್ಯಾನಂತರ 1962ರಲ್ಲಿ ನಡೆದ ಭಾರತ-ಚೀನಾ ಯುದ್ಧ, 1965ರಲ್ಲಿ ಭಾರತ-ಪಾಕ್ ಯುದ್ಧ, 1971ರಲ್ಲಿ ಬಾಂಗ್ಲಾದೇಶ ನಿರ್ಮಾಣ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಸೇರಿದಂತೆ ಇತರ ಸಮರಗಳಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಈ ಸ್ಮಾರಕ ನಿರ್ಮಿಸಲಾಗಿದೆ.
ಇಂಡಿಯಾ ಗೇಟ್ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಲಾಗಿದೆ.
ಚಕ್ರವ್ಯೂಹದಿಂದ ಪ್ರೇರಣೆ ಪಡೆದು 4 ವೃತ್ತಾಕಾರದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಮೊದಲ ವೃತ್ತಕ್ಕೆ ಅಮರ ಚಕ್ರ, ಎರಡನೇ ವೃತ್ತಕ್ಕೆ ವೀರತಾ ಚಕ್ರ, ಮೂರನೇ ವೃತ್ತಕ್ಕೆ ತ್ಯಾಗ ಚಕ್ರ ಮತ್ತು ನಾಲ್ಕನೇ ವೃತ್ತಕ್ಕೆ ರಕ್ಷಕ್ ಚಕ್ರ ಎಂದು ಹೆಸರಿಡಲಾಗಿದೆ. ಈ ನಾಲ್ಕು ವೃತ್ತಾಕಾರದ ಸ್ಥಳದ ನಡುವೆ 15 ಅಡಿ ಎತ್ತರದ ಸ್ತಂಭವನ್ನು ಅಳವಡಿಸಲಾಗಿದ್ದು, ಅದರಲ್ಲಿ ಜ್ಯೋತಿಯನ್ನು ಇಡಲಾಗಿದೆ. ಸ್ತಂಭದ ಕೆಳ ಭಾಗದಲ್ಲಿ ಶಹೀದ್ ಕಿ ಮಜ್ರೋಂ ಪರ್ ಎಂಬ ಖ್ಯಾತ ಕವಿ ಜಗದಂಬಾ ಮಿಶ್ರಾ ಅವರ ವಾಣಿಯನ್ನು ಬರೆಯಲಾಗಿದೆ. ಇನ್ನು ಖ್ಯಾತ ಶಿಲ್ಪಿ ರಾಮ್ ಸುತರ್ ಅವರು ನಿರ್ಮಿಸಿರುವ 6 ಕಂಚಿನ ಪುತ್ಥಳಿಗಳನ್ನು ಸ್ಮಾರಕ ಸ್ಥಳದಲ್ಲಿ ಅಳವಡಿಸಲಾಗಿದೆ.
ಅಲ್ಲದೆ ಪರಮ ಯೋಧ ಸ್ಥಳದಲ್ಲಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದ 21 ಯೋಧರ ಪ್ರತಿಮೆಗಳನ್ನೂ ಇಲ್ಲಿ ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಉಪ ಮೇಜ್ ಬನಾ ಸಿಂಗ್ (ನಿವೃತ್ತ), ಉಪ ಮೇಜರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ಸಬ್ ಸಂಜಯ್ ಕುಮಾರ್ ಅವರ ಪ್ರತಿಮೆಗಳೂ ಇವೆ.
ರಾಷ್ಟ್ರೀಯ ಯುದ್ಧ ಸ್ಮಾರಕ ಸಾರ್ವಜನಿಕ ವೀಕ್ಷಣೆಗೆ ಉಚಿತ ಅವಕಾಶವಿದ್ದು, ಸ್ಮಾರಕದ ಮುಖ್ಯ ಪ್ರದೇಶ ಹಾಗೂ ಪರಮ ಯೋಧ ಸ್ಥಳ ವೀಕ್ಷಣೆಗೆ ಸಮಯ ನಿರ್ಬಂಧವಿದೆ.