Photos: ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ದೋಣಿಯ ಮೂಲಕ ವಿವೇಕಾನಂದ ರಾಕ್ ಸ್ಮಾರಕವನ್ನು ತಲುಪಿದರು. ಬಳಿಕ 'ಧ್ಯಾನ ಮಂಟಪ'ದಲ್ಲಿ ತಮ್ಮ ಧ್ಯಾನವನ್ನು ಪ್ರಾರಂಭಿಸಿದರು.
ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಪವಿತ್ರ ಸ್ಥಳದಲ್ಲಿರುವ ಧ್ಯಾನ ಮಂಟಪದಲ್ಲಿ ಜೂನ್ 1ರ ಸಂಜೆಯವರೆಗೆ ಪ್ರಧಾನಿ ಮೋದಿಯವರು ನಿರಂತರ ಧ್ಯಾನವನ್ನು ಮಾಡಲಿದ್ದಾರೆ.
ಶನಿವಾರ ನಿಗದಿಯಾಗಿರುವ ಏಳನೇ ಹಂತದ ಲೋಕಸಭಾ ಚುನಾವಣೆಯ ಪ್ರಚಾರ ಕೊನೆಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಧ್ಯಾನ ಕೈಗೊಂಡಿದ್ದಾರೆ. ಮೊದಲಿಗೆ ಪ್ರಧಾನಿ ಮೋದಿಯವರು ಭಗವತಿ ಅಮ್ಮನ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳು ಸಂಗಮಿಸುವ ಸ್ಥಳದಲ್ಲಿ ಪ್ರಧಾನಿ ಮೋದಿಯವರು ಧ್ಯಾನ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ನಾಯಕರು ರಾಷ್ಟ್ರೀಯ ಏಕತೆಯ ಪ್ರಬಲ ಸಂಕೇತವಾಗಿ ನೋಡುತ್ತಿದ್ದಾರೆ.
ಪ್ರಧಾನಿಯವರ ಭದ್ರತೆಯನ್ನು ಖಾತ್ರಿಪಡಿಸಲು ವಿವೇಕಾನಂದ ರಾಕ್ ಸ್ಮಾರಕದ ಸುತ್ತಲೂ 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ ಕೂಡ ಕಟ್ಟೆಚ್ಚರ ವಹಿಸಿದೆ.
ಲೋಕಸಭೆ ಚುನಾವಣೆಯ ಅಂತಿಮ ಹಂತದ ಪ್ರಚಾರ ಗುರುವಾರ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿತು. 2019ರ ಚುನಾವಣೆಯ ಕೊನೆಯ ಹಂತದ ಮೊದಲು ಸಹ ಪ್ರಧಾನಿ ಮೋದಿಯವರು ಕೇದಾರನಾಥ ಪ್ರವಾಸದ ಸಮಯದಲ್ಲಿ ಗುಹೆಯಲ್ಲಿ ಧ್ಯಾನ ಮಾಡಿದ್ದರು.
ಧ್ಯಾನವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯದವರೆಗೆ ಪ್ರಧಾನಿ ಮೋದಿಯವರು ಮಂಟಪಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ನಿಂತು ಸುತ್ತಮುತ್ತಲ ಪ್ರಕೃತಿಯನ್ನು ವೀಕ್ಷಿಸಿದರು.
ಸ್ಮಾರಕಕ್ಕೆ ಪ್ರಧಾನಿ ಮೋದಿಯವರ ಭೇಟಿಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು 'ಖಾಸಗಿ' ಭೇಟಿ ಎಂದು ಹೇಳಿದ್ದಾರೆ. ಹೀಗಾಗಿ ಅವರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವೆಂದು ತಿಳಿದುಬಂದಿದೆ.