ಮಾರಮ್ಮನ ದೇವಸ್ಥಾನ ವಿಷಪೂರಿತ ಪ್ರಸಾದ ಸೇವನೆ ದುರಂತ

Sat, 15 Dec 2018-11:51 am,

ಶುಕ್ರವಾರ ಸುಳುವಾಡಿ ಗ್ರಾಮದ ಕಿಚ್‌ ಕುತ್‌ ಮಾರಮ್ಮ ದೇವಸ್ಥಾನದಲ್ಲಿ ಗೋಪುರ ನಿರ್ಮಾಣ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ಏರ್ಪಡಿಸಲಾಗಿತ್ತು. ಪೂಜೆಯ ಬಳಿಕ ಅನ್ನಸಂತರ್ಪಣೆಗಾಗಿ ಟೊಮ್ಯಾಟೋ ಬಾತ್‌ ಮತ್ತು ಪಂಚಾಮೃತ ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಸೇರಿದ್ದ 90ಕ್ಕೂ ಹೆಚ್ಚು ಜನ ಪ್ರಸಾದ ಸೇವಿಸಿದ್ದರು. ಬಳಿಕ ಹಲವು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಹೀಗಾಗಿ ಪ್ರಸಾದದಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿತ್ತು.

ಸುಳುವಾಡಿಯ ಕಿಚ್‌ಕುತ್‌ ಮಾರಮ್ಮ ದೇವಸ್ಥಾನ ಚಿಕ್ಕದಾಗಿದ್ದು, ನೂತನ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆಯೇ ವೈಮನಸ್ಸಿತ್ತು ಎನ್ನಲಾಗಿದೆ. ಈ ವೈಷಮ್ಯವೇ ಆಹಾರದಲ್ಲಿ ವಿಷ ಬೆರೆಸಲು ಕಾರಣವಾಗಿದೆಯೇ ಎಂಬ ಸಂದೇಹ ಮೂಡಿದೆ. 

ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 90ಕ್ಕೂ ಹೆಚ್ಚು ಮಂದಿ ಮೈಸೂರು, ಚಾಮರಾಜನಗರ, ಕೊಳ್ಳೇಗಾಲದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಆರ್​​ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡ 45ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಅಸ್ವಸ್ಥರಾದವರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. 

ಮೈಸೂರಿನ ಕೆಆರ್ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಸ್ವಸ್ಥರಾದವರು ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು. 

ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಗಳಿಗೆ ಸಿಎಂ ಸೂಚನೆ ನೀಡಿದ್ದಾರಲ್ಲದೆ, ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

ಅಲ್ಲದೆ, ಅಸ್ವಸ್ಥರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link