Free Ration Scheme: ದೇಶದ 81 ಕೋಟಿ ಪಡಿತರ ಚೀಟಿದಾರರಿಗೆ ಭರ್ಜರಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ
ಪ್ರಸ್ತುತ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಪ್ರತಿ ಕೆಜಿಗೆ 1-3 ರೂ.ನಂತೆ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಆಂತೋದ್ಯ ಅನ್ನ ಯೋಜನೆ (AAY) ಕುಟುಂಬಗಳಿಗೆ ಪ್ರತಿ ತಿಂಗಳು 35 ಕೆಜಿ ಧಾನ್ಯಗಳನ್ನು ನೀಡಲಾಗುತ್ತದೆ. 2023ರ ಡಿಸೆಂಬರ್ 31ರಂದು PMGKAYಯ ಅವಧಿ ಪೂರ್ಣಗೊಳ್ಳುವ ಮೊದಲು ಪ್ರಧಾನಮಂತ್ರಿಯವರು ಈ ಘೋಷಣೆ ಮಾಡಿದ್ದಾರೆ.
PMGKAYಅನ್ನು 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪರಿಚಯಿಸಲಾಯಿತು. ಇದರ ಅಡಿಯಲ್ಲಿ ಸರ್ಕಾರವು NFSA ಕೋಟಾದ ಅಡಿಯಲ್ಲಿ ವ್ಯಕ್ತಿಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಕೇಂದ್ರವು PMGKAY ಮತ್ತು NFSA ಯೋಜನೆಗಳನ್ನು ವಿಲೀನಗೊಳಿಸಿದೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ‘ದೇಶದ ವಂಚಿತ ಜನರಿಗೆ ಹೊಸ ವರ್ಷದ ಉಡುಗೊರೆ’ ಎಂದು ಸರ್ಕಾರಿ ಅಧಿಕಾರಿಗಳು ಬಣ್ಣಿಸಿದ್ದಾರೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ 81.35 ಕೋಟಿಗೂ ಹೆಚ್ಚು ಜನರಿಗೆ ಆಹಾರ ಧಾನ್ಯ ಸಿಗಲಿದೆ ಎಂದು ಹೇಳಲಾಗಿತ್ತು. ಫಲಾನುಭವಿಗಳು ಈ ಧಾನ್ಯಗಳಿಗೆ ಯಾವುದೇ ಹಣ ಪಾವತಿ ಮಾಡುವ ಅಗತ್ಯವಿಲ್ಲವೆಂದು ಹೇಳಲಾಗಿದೆ.
NFSAಅನ್ನು 2013ರಲ್ಲಿ ಕೇಂದ್ರವು ಪ್ರಾರಂಭಿಸಿತು. ಇದರ ಅಡಿಯಲ್ಲಿ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಇತ್ತೀಚೆಗೆ ಆಹಾರ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ ಪಿಎಂಜಿಕೆಎವೈ ಅಡಿಯಲ್ಲಿ ಸರ್ಕಾರವು ಸುಮಾರು 1,118 ಲಕ್ಷ ಟನ್ ಆಹಾರ ಧಾನ್ಯಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ ಎಂದು ಮಾಹಿತಿ ನೀಡಿದ್ದರು.
ಒಂದರಿಂದ ಏಳನೇ ಹಂತದವರೆಗೆ ಆಹಾರ ಸಬ್ಸಿಡಿ ಮತ್ತು ಕೇಂದ್ರದ ನೆರವಿಗಾಗಿ ಒಟ್ಟು ಅನುಮೋದಿತ ಬಜೆಟ್ ಸುಮಾರು 3.91 ಲಕ್ಷ ಕೋಟಿ ರೂ. ಆಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದರು.