ಮೊದಲ ಬಾರಿಗೆ ಸಂಸದರಾಗಿ ಪ್ರಮಾಣವಚನ: ಅಜ್ಜಿ ಇಂದಿರಾ ಗಾಂಧಿಯನ್ನೇ ನೆನೆಪಿಸುವಂತಿರುವ ಪ್ರಿಯಾಂಕಾ ಗಾಂಧಿ!
ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿ ಗೆದ್ದಿರುವ ಪ್ರಿಯಾಂಕಾ ಗಾಂಧಿ ಇಂದು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರು ತೊಟ್ಟಿದ್ದ ಸೀರೆ ಥೇಟು ಅವರ ಅಜ್ಜಿ ಇಂದಿರಾ ಗಾಂಧಿ ಅವರನ್ನು ನೆನಪಿಸಿತು.
ದೇವರನಾಡು ಎಂದೇ ಕರೆಯಲ್ಪಡುವ ಕೇರಳದಿಂದ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿ ಒಂದೆಡೆ ಅಜ್ಜಿ ಇಂದಿರಾ ಗಾಂಧಿ ನೆನಪಾಗುವಂತೆ ಮಾಡಿದರೆ, ಇನ್ನೊಂದೆಡೆ ಕೇರಳದ ಸಂಸ್ಕೃತಿ ಎತ್ತಿ ಹಿಡಿಯುವ ರೀತಿಯಲ್ಲಿ ಸೀರೆಯುಟ್ಟು ಸಂಸತ್ ಪ್ರವೇಶಿಸಿದರು.
ಕೇರಳದ ಹಬ್ಬಗಳಲ್ಲಿ ಸಾಮಾನ್ಯವಾಗಿ ಮಲೆಯಾಳಿ ಮಹಳೆಯರು ತೊಡುವ ಕಸವು ಸೀರೆ, ಅಂದರೆ ಚಿನ್ನದ ಬಣ್ಣದ ಬಾರ್ಡರ್ ವುಳ್ಳ ಬಿಳಿ ಸೀರೆಯನ್ನು ತೊಟ್ಟು ಸಂಸತ್ತಿಗೆ ಬಂದ ಪ್ರಿಯಾಂಕಾ ಗಾಂಧಿ ಅವರು ಅಜ್ಜಿ ಇಂದಿರಾ ಗಾಂಧಿ ಅವರಂತೆಯೇ ಕಾಣಿಸಿಕೊಂಡರು.
ಹಲವು ವರ್ಷಗಳಿಂದ ರಾಜಕೀಯದಲ್ಲಿ ಇದ್ದರೂ ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಸಹೋದರ ರಾಹುಲ್ ಗಾಂಧಿ ಅವರಂತೆಯೇ ಸಂವಿಧಾನದ ಪುಸ್ತಕವನ್ನು ಹಿಡಿದು ಗಮನ ಸೆಳೆದರು.
ಪ್ರಿಯಾಂಕಾ ಗಾಂಧಿ ಅವರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸದರಾಗಿ ಪ್ರಮಾಣವಚನ ಬೋಧಿಸಿದರು.